13 ಫೆಬ್ರವರಿ 2011

ಕಾಲವೇ ಕೇಳು




ಕಾಲವೇ ,
ಅಂಬೆಗಾಲಿಡದ  ಕೂಸು
ಚೀರಾಡುತ್ತಿದೆ
ಕೇಳುವವರಿಲ್ಲ !
ಚೂರಾದ ಹೃದಯದಲ್ಲಿ
ಪ್ರೀತಿ ಸಿಂಚನಕ್ಕಾಗಿ
ಕಾದು ಕುಳಿತಿರುವವರಿಲ್ಲ.
ಸುಕ್ಕುಗಟ್ಟಿದ ಮುಖಕ್ಕೆ
ಮೊಡವೆ - ಗೊಡವೆ ಇಲ್ಲ:
ಇದ್ದರೂ ಮದ್ದು ಹುಡುಕುವವರಿಲ್ಲ.
ಆಗಸದ ಬಾಗಿಲಿನಲ್ಲಿ
ಕಾದು ಕುಳಿತಿಹ ನಕ್ಷತ್ರಗಳ
ಎಣಿಸುವವರಾರು?
ಕಾರ್ಗತ್ತಲಿನ- ಮನದ ಮೂಲೆಯಲ್ಲಿ
ವಿಷವು ಬಿಟ್ಟಿರುವದನ್ನು
ಕಾಣುವವರಾರು?
ಸೋತ ಮನದ ಸಾಲಿನಲ್ಲೂ
ಗೆಲುವ ಭಾವವ
ಗುರುತಿಸುವವರಿಲ್ಲ.
ಕಾದಾಡುವ ಜನಕ್ಕೆ
ಜಗಳ ಕಾಯುವ ತವಕ!
ಬಿಡಿಸುವವರಿಗೆ ಗತಿಯಿಲ್ಲ.
ಪುಗಸಟ್ಟೆ ಸಿಕ್ಕ ಜಾಗಕ್ಕೆ
ಮನೆ- ಮನ ಅರ್ಪಣೆ
ಈ ಜನಕ್ಕೆ ಕೊರತೆ? ಇಲ್ಲ.
ಸನ್ನಿ ಹಿಡಿದ ಬಾಣಂತಿಗೆ
ಉಪಚಾರ ಮದ್ದು- ಹೊರತು  
ಗಂಡೇ?    ಹೆಣ್ಣೇ?... ಮುಖ್ಯವಲ್ಲ.
ಕೂಡಿಟ್ಟ ಹಣವೆಲ್ಲಾ
ಉಪಯೋಗದ ಗತಿಯಲ್ಲಿ...
ಕಪ್ಪಾಗುವದು ಬೇಕಿಲ್ಲ.
ಕಾಲವೇ  ಕೇಳಿಲ್ಲಿ , ನಿಲ್ಲದಿರು
ನೀ ಕಾದಷ್ಟು , ಕುಳಿತಷ್ಟೂ,
ಹೇಳುವವರಿಲ್ಲ, ಕೇಳುವವರಿಲ್ಲ!
                          
                          ಚಂದ್ರಿಕಾ ಹೆಗಡೆ
                                                                  

2 ಕಾಮೆಂಟ್‌ಗಳು: