28 ಮಾರ್ಚ್ 2011

ಕಾದ ಮಾತು...

ಮರುಭೂಮಿಯೆಡೆ  ಒಂದು ಮರ
ತನ್ನಿ ಸನಿಹದ ಜಲವ ರೂಕ್ಷಗೊಳಿಸಿ
ಬೇರುಗೊಲೆಯಾದುದ ನಾ ಕಂಡೆ .
ಕಳವಳಗೊಂಡ ಸ್ವಂತ ಮನಸು
ನಿನ್ನ ಸಮಾಧಾನದ ಹಂಗಿಗೆ
 ಕಾದು ಕುಳಿತಿದೆ ಕಾಡಬೇಡ.
ಕೊಳೆತ ಜಿಡ್ಡು ಜಿಡ್ಡಾದ ಮನವ
ತೊಳೆಯುವಲ್ಲಿ ಸಹಕರಿಸು , ತಿಳಿನೀರಿನಿಂದಲೇ .
ಕುಡಿವ ನೀರಿಗೆ
 ಕೊಳೆ ತೊಳೆಯುವ  ಭಾಗ್ಯ?
ಮನ -ಕಾದುಕೊಂಡ ಮರಳು
ನೀ, ಎಷ್ಟೇ ನೀರ ಹನಿಸಿದರೂ
ಮಾಯ! ನಾ ಬಲ್ಲೆ.
ತಿಳಿ ತಿಳಿದು ಕಾಯುವ ನನ್ನೀ
ಕಾತುರಗಳು ಕೊಂಡಿ ಕೊಂಡಿಯಲ್ಲೇ
ಒತ್ತಟ್ಟಿಕೊಂಡಿವೆ ಗಾಢ ಬಂಧನದ ಬಿಸುಪಿನಲ್ಲಿ
ಮಂದ ಮಾರುತ ಮರೆಯಲ್ಲಿದೆ
ಸೌರಭ ಇನ್ನೆಲ್ಲಿ?
ಮನದ ತೊಳಲಾಟಕ್ಕಿಂತ
ನಾಲಿಗೆ ಹೊರಳುವಿಕೆ ಲೇಸು!


ಪ್ರಕಟ ಸಕಾಲಿಕ ೨೦೦೪ ಅಗಸ್ಟ್ ೨೬


ಕವನ ಬರೆದು ನಿರುಮ್ಮಳಾದ ಕ್ಷಣ ...

                                           ಚಂದ್ರಿಕಾ ಹೆಗಡೆ


23 ಮಾರ್ಚ್ 2011

ಇವತ್ತು ಬಂದ ಊರಿನ ಸವಿ ಸವಿಯಲ್ಲಿ.....

ಮಾವ ಊರಿಗೆ ಹೋಗುವದನ್ನೇ ಕಾಯುತ್ತಿದ್ದೆ. ನನ್ನ ಲಿಸ್ಟ್ ಸಿದ್ಧವಾಗಿತ್ತು . ಅದ್ರಲ್ಲಿ ಮೊದಲು ಸಂಪಿಗೆ ಹಣ್ಣು. ಈಗ ಸಂಪಿಗೆ ಹಣ್ಣಿನ ಸಮಯ... ಮತ್ತೆ ಹೊಸ ಬೆಲ್ಲ... ಆಲೆಮನೆಯ ಸಮಯ... ಕಬ್ಬು... ಮಾವಿನ ಮಿಡಿ.... ಹೀಗೆ ಲಿಸ್ಟ್ ದೊಡ್ಡದಾಯಿತು... 
ಮಾವ ಕೂಡ ಹಿಂದೆಯಿಲ್ಲ... ತನ್ನ ಫ್ರೆಂಡ್ಸ್ ಮಕ್ಕಳ ಹತ್ತಿರ ಎಲ್ಲವನ್ನು ಲಿಸ್ಟ್ ಕೊಟ್ಟು...ನನ್ನಲ್ಲಿ  ಮತ್ತೆ ಇನ್ನೆನ್ತಾದ್ರು ಇದ್ದ... ಹೇಳು ಹೇಳಿ ಪ್ರೀತಿಯಿಂದಲೇ ಕೇಳಿದ್ದರೆ... ನಾನು ಏನು ಇಲ್ಲ ಅನ್ನುವದರ ಬದಲಾಗಿ ... ನೆನಪು  ಮಾಡ್ಕಂಡು ಹೇಳ್ತೆ  ಎಂಬ ಉತ್ತರ... ನನ್ನ ಮಗನ ಲಿಸ್ಟೇ ಬೇರೆ!... ಪಕ್ಕದ ಮನೆಯ ಆಂಟಿ  ನಿನ್ನ ತಾತ ಎಲ್ಲಿ ಅಂತ ಕೇಳಿದ್ರೆ ಅಭಿಮಾನ ದಿಂದ ದಾಚಾ( ದ್ರಾಕ್ಷಿ)ಹಣ್ಣು ಬಾನಾ(ಬಾಳೆಹಣ್ಣು banana ) ತಂ.. ಹೋದಾ.... ಹೇಳೋ ಉತ್ತರ ಬೇರೆ .....
ಇನ್ನು ಅಮ್ಮ: ಎಂತಾ ಬೇಕೇ... ಅವಳಲ್ಲಿನ ಲಿಸ್ಟ್ ಬೇರೇನೆ... ಅರಿಶಿನ ಹಿಟ್ಟು  ಕೊಡೆ ಮಾರಾಯ್ತಿ ... ಮಾಡ್ಸಿದ್ದು... ನನ್ನ ಪಾಲಿಗೆ ಹುಳಿಸೆಹಣ್ಣು... ಒಣ ಮೆಣೆಸು ಸ್ವಚ್ಚಾ ಮಾಡಿ  ಕೊಡು...ಗೋಳಿ ಸೊಪ್ಪು ... ಎಲೆಗುರಿಗೆ ಸೊಪ್ಪು... ಎಲ್ಲಾ ಕಳಿಸು...

ಮಗಳೆನ್ನುವ... ಪ್ರೀತಿಯ  ಅಮ್ಮ...
ಸೊಸೆಯಾದರು ಮಗಳೆನ್ನುವ  ಮಾವ .... 
ಬದುಕಿಗೆ ಇನ್ನೇನು ಬೇಕು ಅಲ್ವೇ!



 ಊರಿಂದ ಬಂದ ಪ್ರೀತಿಯ ....ಸಂಗತಿಗಳು... 

ಕಬ್ಬು ಬೆಳೆದು ಪ್ರೀತಿಯಿಂದ ಕಳುಹಿಸಿದವರಿಗೆ... 
ನನ್ನ ಧನ್ಯವಾದ...



ವರ್ಷ ಪೂರ್ತಿ ಊಟದ ಜೊತೆ ಸಾಥ್ ಕೊಡುವ ಉಪ್ಪಿನಕಾಯಿ ... ಅಪ್ಪೆಮಿಡಿ ... ಎತ್ತರದಿಂದ ಕೊಯ್ದು ಪ್ರೀತಿಯಲ್ಲಿ ಕೊಟ್ಟವರಿಗೆ... ಕೃತಜ್ಞ 




ಸಂಪಿಗೆ ಹಣ್ಣು ನೆನಪಿಟ್ಟು ತಂದ ಮಾವ ಹಾಗು ಕಳುಹಿಸಿದ ಅವರ ದೋಸ್ತ್  ಗೆ ನಮಸ್ತೆ...




ನಿಮಗೆ ಒಂದೇ ಹಣ್ಣು ಹಾಂ!


ಇವತ್ತು ಬಂದ ಊರಿನ ಸವಿ ಸವಿಯಲ್ಲಿ.... ಪುರುಸೊತ್ತು ಇಲ್ಲದೆಯೇ...ಸವಿಯಲ್ಲಿ  ತಲ್ಲಿನ..
ಚಂದ್ರಿಕಾ ಹೆಗಡೆ
 

17 ಮಾರ್ಚ್ 2011

ಕನಸ ರೂಪು





ಕನಸುಗಳೇ ಹಾಗೆ !
ಮನ ಬಡಿದೆಬ್ಬಿಸಿ
ತಿಣುಕಾಡಿಸಿ ಕಾಡುವ
ಬಯಕೆಗಳ ರೂಪ..

ಕನಸುಗಳೇ ಹಾಗೆ !
ಬಂಧ , ಭಾವಗಳ
ಸಮ್ಮೋಹದಲಿ  ಮಿಂದು
ಬೆಂದು ನೆನಪಿಸುವ ರೂಪ...


ಕನಸುಗಳೇ ಹೀಗೆ!
ಕಂಡ ಕಂಡಿದ್ದನೆಲ್ಲಾ
ಮರಳಿಸಿ , ಕುಲುಕಾಡಿಸಿ
ಮತ್ತೆ ಮತ್ತೆ ತೋರುವ ರೂಪ..


ಕನಸುಗಳೇ ಹೀಗೆ !
ಮೌನ ವಾಗಿದ್ದುಕೊಂಡೇ
ಮನದಾಳದಿಂದ ಬರುವ
ನೋವು ನಲಿವಿನ ರೂಪ!

ಕನಸಿಗೊಂದು  ರೂಪು ಕೊಡುವ ಸಮಯ ನನ್ನದು..
ಚಂದ್ರಿಕಾ ಹೆಗಡೆ
(ಸಾಪ್ತಾಹಿಕ  ಸೌರಭದಲ್ಲಿ ೨೫-೦೫-೨೦೦೩ ರಲ್ಲಿ  ಪ್ರಕಟ).

16 ಮಾರ್ಚ್ 2011

ಓ ನನ್ನ ಕಲ್ಪನೆಯೇ

  

                                 ಓ ನನ್ನ ಕಲ್ಪನೆಯೇ .....

ಇರುವ ಒಂದೆರಡು ಕ್ಷಣಗಳಲ್ಲಿ ನಿನ್ನದೆಂತಹ ಸಾಮರ್ಥ್ಯ..ಮುಂದಿನ ದಿನಗಳಿಗೆ ದೂಡುವ ಸಾರಥ್ಯದ ಅತಿಥಿಯೇ ...ಚಂದ್ರ ಬಳಿ ತಾರೆಂಬ ಮಗುವಿನ ಹಠ ನಿನ್ನಿಂದಲೇ.. ಬಳಿ ಬಂದರೆ ಆಟವಾಡಬಹುದೆಂಬ ಸ್ಪೂರ್ತಿ ನಿನ್ನದೇನೆ ....
ಪ್ರೀತಿಯ ಬಯಕೆಯ ಯೌವನದಲ್ಲಿ ಸೌಂದರ್ಯದ ಪರಿಜ್ಞಾನ ನಿನ್ನದೇ... ಇಂತಹ ದಿರಿಸೇ ಬೇಕೆಂಬ ಪ್ರಜ್ನೆಯಿತ್ತದ್ದು ನಿ ಅಲ್ಲವೇ?
ಓ ... ಆಶಯದ ಕಲ್ಪನೆಯೇ ವಿಚಿತ್ರ ನೋಡು ನೀನು ... ಪ್ರೀತಿ ಸಿಂಚನದ ಆಮಿಷವೊಡ್ಡಿ ಪ್ರೀತಿ ಕುರುಡಾಗುವದೂ ನಿನ್ನಿಂದಲೇ 
ಹುಡುಗಿ ಸತ್ತಳು... ಓಡಿಹೋದಳು...ಎಲ್ಲ ನಿನ್ನದೇ ತಾನೇ?
ನಾಳೆಯ ಕಾಯುವಿಕೆ ನಿನ್ನೆಯ ಹಸಿ ಬಿಸಿ ಸತ್ಯ ವರ್ತಮಾನದ ಘಟನೆಗಳೆಲ್ಲಾ ...... ಮತ್ತೇನು ನಿನ್ನದೇ!

"ಮಗು- ಮದುವೆ- ಮೊಮ್ಮಗು"
ಹೆಂಡತಿ -ಗೆಳತಿ ಪ್ರೀತಿಯ ಸೋರಿಕೆ ನಿನ್ನಿಂದಲೇ!

ಕಲ್ಪನೆಯೇ....
" ಬಾಳು ಬೆಳಕಾಗಿಸು ಬರಿದಾಗಿಸಬೇಡ...
ಬದುಕು ಹಸನಾಗಿಸು ಒಣಗಿಸಬೇಡ....
ಕತ್ತಲಲ್ಲಿ ದೀಪ ದೊಡ್ದದಾಗಿರದಿದ್ದರು
ಮೊಂಬತ್ತಿಯನ್ನಾದರೂ  ಬೆಳಗಿಸು"

ಬದುಕೆಂದರೆ ನೀನೆ ಗೊತ್ತು...
ಬದುಕಿನ ಕೊನೆಯೆಂದರೆ ನೀನಾಗಬೇಡ...
ಒಲವಿನ ಕಾರಣ ನೀನೆ...
ಒಲ್ಲದ ಸಂಗತಿಗೆ ಕಾರಣವಾಗದಿರು....

09 ಮಾರ್ಚ್ 2011

ಉಪ್ಪಲ್ಲಿ ಹಾಕಿದ ನೆಲ್ಲಿಕಾಯಿ ತಾರೆ...

                                               


ಪ್ರೀತಿಯ ಗೆಳತಿ,
                      ನಾನು ಇವತ್ತು ನನ್ನ ಕಾಲೇಜಿನಲ್ಲಿ  ತರಗತಿಗೆ ಹೋಗಬೇಕೆಂದು ಹೊರಟಿದ್ದೆ. ಆದರೆ ಯಾವುದೋ ಕಾರ್ಯಕ್ರಮದ ನಿಮ್ಮಿತ್ತ ತರಗತಿ ನಡೆಯುವದಿಲ್ಲವೆಂದು ತಿಳಿದು  ಹಿಂದಿರುಗಿ ಬರುತಲಿದ್ದೆ.  ತಟಕ್ಕನೆ ನನ್ನನ್ನು ಒಂದು ಸುವಾಸನೆ ಸೆಳೆಯಿತು ಕಣೆ! ತಿಳಿಯಬೇಡ"ಯಾವುದೊ ಪರಿಮಳ ದ್ರವ್ಯವೆಂದು ". ' ಉಪ್ಪಲ್ಲಿ ಹಾಕಿದ ನೆಲ್ಲಿಕಾಯಿ ವಾಸನೆಯೇ ಅದು!' ಅದೆಕೆನೋ ಒಂದರೆಘಳಿಗೆ ಅಲ್ಲೇ ಸ್ತಬ್ಧ .
                ಗೆಳತಿ, ಇದಕ್ಕೆಲ್ಲ ಕಾರಣ ನೀನೆ! ಬಿಡೆ ಇಲ್ಲದೆಯೇ ಹೇಳುವೆನು.. ಹಂ... ಅದೇನು ರುಚಿಯಿತ್ತೆ ನಿಮ್ಮ ಮನೆಯಿಂದ ತರುತ್ತಿದ್ದ ಆ ನೆಲ್ಲಿಕಾಯಿಗಳು. ಉಪ್ಪಿನ ನೀರಿಗೆ ಸೂಜಿ ಮೆಣಸು, ಇಂಗು.. ಜಪ್ಪಿ  ಭರಣಿಯಲ್ಲಿ ಹಾಕಿ, ಒಂದು ವಾರದ ನಂತರ ತರುತ್ತಿದ್ದೆಯಲ್ಲ.... ನಿನ್ನ ಪಾಟಿಚೀಲ ನನ್ನ ಬಳಿ ಇಟ್ಟಾಗಲೇ ನಾನು ಅರ್ಥಮಾಡಿಕೊಳ್ಳುತ್ತಿದ್ದೆ, ಅದ್ರಲ್ಲಿ ನನಗೆ ಬೇಕಾದಸ್ಟು ನಾನು ತೆಗೆಯಬಹುದೆಂದು....  ಜತೆಯಲ್ಲಿ ನಾಳೇನು ತರ್ತೇನೆ  ಎಂಬ ಭರವಸೆ...
ನೆಲ್ಲಿಕಾಯಿ ದಿನಗಳಲ್ಲಿ ನಮ್ಮ ಹೊಟ್ಟೆಯಲ್ಲಿ ಬರಿ ... ಅದೇ! ಅದಕ್ಕೇನೆ ಇರಬೇಕು ನಾವು ಅಸ್ಟೊಂದು ಚುರುಕು<!>
ಮನೆಗೆ ಬರುವಸ್ಟರಲ್ಲಿ ಪಾಟಿಚೀಲದಲ್ಲಿ  ಬೀಜಗಳೇ  ತುಂಬಿರುತ್ತಿತ್ತು. ಬಾಯಿ ನೋಡಿದರೆ ಇವರಿಗೆ ಯಾವಾಗಲೂ ಹಲ್ಲು ನೋವೇನೋ ಅನ್ನುವ ಹಾಗೆ ಒಂದು ಕಡೆ ನೆಲ್ಲಿಕಾಯಿ ಯನ್ನು ತುಂಬಿ ಉಬ್ಬಿರುತ್ತಿತ್ತು.  ಆ ದಿನಗಳು ಮುಗಿಯಿತೆಂದರೆ ನೆಲ್ಲಿಕಾಯಿಯ ಉಳಿದ ಉತ್ಪನ್ನಗಳು ನಮ್ಮಲ್ಲಿ ಸಿದ್ಧವಾಗಿರುತ್ತಿತ್ತು. !
ನೆಲ್ಲಿ ಕಾಯಿ ಚಿಟ್ಟು ....
ಬಾಯಲ್ಲಿ ನೀರು ಬಂತೆ ಇವತ್ತು...ಹೀಗೆ ಒಂದು ದಿನ ನೆನಪಾದಾಗ ಗಾಂಧೀ ಬಜಾರ್ ಗೆ ಹೋಗಿ ೧ ಕೆ.ಜಿ  ತಗೊಂಡು ಬಂದು ಜಾಮ್ ಮಾಡಿ ಇಟ್ಟಿದ್ದೇನೆ. ಆದರೆ ಆ ಉಪ್ಪಲ್ಲಿ ಹಾಕಿದ ನೆಲ್ಲಿಕಾಯಿಗಳಿಗೆ ಇದು ಒಂಚೂರು ಸಮ ಅಲ್ಲಾ ಮಾರಾಯ್ತಿ.
             ನೆಲ್ಲಿ ಕಾಯಿ ಹಾಕಿದ ಮೇಲೆ ಅದ್ರ ಮೇಲೆ ಹದಿ ಬಂದರೆ ನೆಲ್ಲಿ ಬಹಳ ರು,,,,ಚಿ... ಆಗ್ತು ಎನ್ನುವ ನಿನ್ನ ಮಾತುಗಳು ನನ್ನಲ್ಲಿ ಇವತ್ತಿಗೂ ಇದೆ... ಏನು ಮಾಡಲಿ ನೆಲ್ಲಿಕಾಯಿಗಳೇ ಇಲ್ಲ!
 ಬಾಯಲ್ಲಿ ರುಚಿಯಿದೆ ಬೀಜಗಳೇ ಇಲ್ಲ! ಇದಕ್ಕೆಲ್ಲ ನೀನೆ ಕಾರಣ ... ಹಾಂ...ಮೊದಲು ಮದುವೆಯಾಗಿ ಹೋಗಿದ್ದು ನೀನೆ!... ಒಂದು ಕಾರಣ... ತಿರುಗಿ ಮಾತಾಡಬೇಡ...'ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದು ನೀನು ಅಂತ ' . ಭಾವನ ಹತ್ತಿರ ಹೇಳಿ ಎಳೆದುಕೊಂಡು ಬರುತ್ತೇನೆ ...ಒಟ್ನಲ್ಲಿ ಉಪ್ಪಲ್ಲಿ ಹಾಕಿದ ಆ ನೆಲ್ಲಿಕಾಯಿ ಕೊಡು...
ನೆನಪಿದೆಯೇ ಸುಬ್ಬಿ, ಪಾಟೀ ಚೀಲದಲ್ಲಿ ಇಟ್ಟ ಎಲ್ಲಾ ವಸ್ತುಗಳೂ ನೆಲ್ಲಿಕಾಯಿ ವಾಸನೆಯೇ! ಕಡ್ಡಿ  ಬರೆಯದೆ ಇರುವದಕ್ಕು ಇದೆ ಕಾರಣ!

ಹೇ...ಟೀಚರ್ ಬೋರ್ಡಿನ ಕಡೆಗೆ ತಿರುಗುವದನ್ನು ಕಾದು...ಪಟಕ್ಕನೆ ನೆಲ್ಲಿ ಕಾಯಿ ಕೆರೆದು ಸವಿದ ಘಳಿಗೆ ನಮ್ಮದೇನೆ ....


ಮುಂದಿನ ಸಲ ಊರಿಗೆ ಬಂದಾಗ ಉಪ್ಪಿನ ನೆಲ್ಲಿಕಾಯಿ ಕೊಡದೆ ಹೋದರೆ ನಿನ್ನ ಮನೆಗೆ ಧಾಳಿ ಇಡುವೆ... ಪ್ರೀತಿಯಿಂದ...

                             ಸ್ನೇಹಿತೆ.
                               ಚಂದ್ರಿಕಾ ಹೆಗಡೆ

07 ಮಾರ್ಚ್ 2011

ಜನ್ನನ "ಯಶೋಧರ ಚರಿತೆ "ಯಲ್ಲಿ ಇಷ್ಟವಾದ ಕೆಲವು ಮಾತುಗಳು


    " ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ"
ಬೇವನ್ನು ಮೆಚ್ಚಿದ ಕಾಗೆಗೆ ಮಾವು ಮೆಚ್ಚಿಗೆಯಾದೀತೆ ?


"ಪರಮೆ ಪಗಲ್ ಮುಗಿಯೇ ಸಿಲ್ಕಿ ಕೈರವದಿನಿರುಳ್ ಪೊರಮಡುವಂತೆ"
ನೈದಿಲೆಯೊಳಗೆ ಸಿಕ್ಕಿ ಬಿದ್ದ ಹೆಣ್ಣು ದುಂಬಿ , ಹಗಲು ಕಳೆದಾಗ ಅದರೊಳಗಿಂದ ಹೊರಹೋಗುವಂತೆ ....


"ಈಗಳೋ ಮೇಣ್ ಆಗಳೋ ಮೇಣ್ 
ಸಾಗುದುರೆಗೆ ಪುಲ್ಲನಡಕಿ  ಕೆಡುವನೆ ಚದುರಂ "
ಬುದ್ಧಿವಂಥನಾದವನು ಈಗಲೋ ಆಗಲೋ ಇನ್ನಷ್ಟು ಹೊತ್ತಿನಲ್ಲೋ ಸಾಯುವ ಕುದುರೆಗೆ ಹುಲ್ಲು ಹಾಕಿ ಹಾಳಾಗುತ್ತಾನೆಯೇ?


"ಮೇಗಂ ಬಗೆವೊಡೆ ವಧೆ ಹಿತಮಾಗದು" 

ಮೇಲ್ಮೈಯನ್ನು ಬಯಸುವದಾದರೆ , ಕೊಲೆ ಮನುಷ್ಯನಿಗೆ ಹಿತವನ್ನು ಉಂಟುಮಾಡುವದಿಲ್ಲ.


" ಕಣ್ಣರಿಯದೊಡಮ್   ಕರುಳರಿಯದೆ ?"

ಕಣ್ಣು ಅರಿಯದಿದ್ದರು ಕರುಳರಿಯದೆ .....


".... ಕೋಣನ ಪೋರ್ಕುಳಿ ಗಿಡುವಿಗೆ ಮಿತ್ತು "
ಕೋಣನ ಕದನ ಕುತೂಹಲ ಗಿಡಕ್ಕೆ ಮೃತ್ಯು 

"ಪೊಲ್ಲಮೆಯೇ  ಲೇಸು ನಲ್ಲರ  ಮೈಯೋಳ್"
ನಮ್ಮ ಮೆಚ್ಚಿನವರ ಮೈಯಲ್ಲಿ ದೋಷವಿದ್ದರೆ ಅದೇ ಅವರ ಮೇಲ್ಮೈ ಎನಿಸುತ್ತದೆ .


"ತರಿದೊಡೆ ಕಡಿದೊಡೆ  ಸೀಳ್ ದೊಡೆ 
ಪೊರಮಡುವಂತೆ ಕಿಚ್ಚು ಕಾಷ್ಠ ದಿಂ ಪೊಸೆಯಲೋಡಮ್
ಪೊರಮಡುವದಂತೆ "
ಕಟ್ಟಿಗೆಯನ್ನು ಕೊಚ್ಚಿದರೆ, ಸೀಳಿದರೆ ಹೇಗೆ ಮಾಡಿದರೂ ಅದರಿಂದ ಬೆಂಕಿ ಹೊರಡುವದಿಲ್ಲ. ಅದನ್ನು ತಿಕ್ಕಿದಾಗ ಮಾತ್ರ ಅದರಿಂದ ಅಗ್ನಿ ಉದ್ಭವಿಸುತ್ತದೆ. 



                         ಅಕ್ಷರಗಳು  ಯಾಕೋ ಸರಿಯಾಗಿ ಮೂಡುತ್ತಿಲ್ಲ. 

                              ಓದಿನಲ್ಲಿ...

                            ಚಂದ್ರಿಕಾ ಹೆಗಡೆ

03 ಮಾರ್ಚ್ 2011

ಸಂಬಂಧ ದೂರವಾಗುವದೇ ? ದೂರ ಮಾಡುತ್ತೇವೆಯೇ!

ಚಿಕ್ಕವರಿದ್ದಾಗ ಆತ್ಮೀಯ ಸ್ನೇಹಿತ/ ಸ್ನೇಹಿತೆ ಯರಿಗೆ ಇನ್ನೊಬ್ಬರೂ ಆತ್ಮೀಯರಾಗುತ್ತಿದ್ದರೆ    ಅಂದ್ರೆ ಎನೋ ಒಂಥರಾ ಸಿಟ್ಟೂ.. ಹೊಟ್ಟೆಕಿಚ್ಚೋ...ಆಗುತ್ತಿರುವದನ್ನು ಗಮನಿಸಿಕೊಂಡಿದ್ದೆ. ಎಲ್ಲೋ ನಮ್ಮಿಂದ ದೂರವಾಗಬಹುದು ಅಂಥಾ. ಆಗ ಈ ಪರಿಸ್ಥಿತಿ  ಎಷ್ಟು   ಗಂಭೀರವಾಗುತ್ತಿತ್ತೆಂದರೆ  ದೂರವಾಗುತ್ತೆವೆನೊ ಎಂಬ ಆತಂಕದಿಂದಲೇ  ನಾವೇ ದೂರವಾಗುವಸ್ಟು...
ದಿನಗಳೆದಂತೆ  ಅರ್ಥವಾಗತೊಡಗಿತು ....

ಮುಂದಿನ ದಿನಗಳು ಎಲ್ಲ ಸ್ನೇಹತ್ವ ಮಯ!



ಜೀವನದ ಹೊಸ ತಿರುವುಗಳಲ್ಲಿ ಮನುಷ್ಯ ಬದಲಾಗದಿದ್ದರೂ ಜವಾಬ್ದಾರಿ-ಕೆಲಸ-ಜಂಜಡಗಳ ನಡುವೆ ನಮ್ಮನ್ನು ಎಷ್ಟು ಆಳಕ್ಕೆ ಇಳಿಸುವದೆಂದರೆ ಅನೇಕ  ವರ್ಷಗಳು ವರೆವಿಗೂ  ಸುತ್ತಣ ಪ್ರಪಂಚದ ಅರಿವೇ ಇಲ್ಲ ಅನ್ನುವಷ್ಟರ ಮಟ್ಟಿಗೆ!

ಪಕ್ಕದ ಮನೆಯ ಮಕ್ಕಳು...ನಮ್ಮೆದುರಿಗೆ ಅ , ಆ ,,, a b c  ಕಲಿತು...ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆ ನೌಕರಿ ಯಲ್ಲಿ ಇರುತ್ತಾರೆ . ನಾವು ಹೊರಗಿನಿಂದಲೇ" ನೋಡು ಅವನಿಗೆ/ಳಿಗೆ  ಎಂಥಾ ಸೊಕ್ಕು.... ಮೊದಲು ಕಾಲ್ ಮಾಡ್ತಿದ್ದ ಈಗ ನೋಡು" ಎಂದು ಜರಿಯುತ್ತೇವೆ.. ತನ್ನ ಕೆಲಸದಲ್ಲಿ ಏನೋ ಮಹತ್ವಾಕಾಂಕ್ಷೆಯಿಂದಾ ಆತ ತೊಡಗಿರುತ್ತಾನೆ! ಕಂಡರೆ ಮಾತನಾಡಿಸಿ ವಿಚಾರಿಸುವ ಸೌಜನ್ಯ ಅವನಲ್ಲಿದೆ . ಆದರೆ ನಿರೀಕ್ಷೆ ಹೆಚ್ಚಿನದು!


ಇನ್ನು ಎಲ್ಲರ ಜೀವನದಲ್ಲಿ ಸಾಮಾನ್ಯವಾದ ಪಾಡು !

ಮದುವೆಯಾದ ದಂಪತಿಗಳ ಪಾಡಂತೂ  ಅದರಲ್ಲೂ ಗಂಡಿನ ಪರಿಸ್ಥಿತಿ ದೇವರಿಗೆ ಪ್ರೀತಿ! " ನೋಡು ಅಣ್ಣ  ಅತ್ತಿಗೆಯ ಹಿಂದೆ ಹಿಂದ್  ಹ್ಯಾಗೆ ಹೋಗ್ತಾನೆ" ಅನ್ನೋ ಧ್ವನಿಗಳನ್ನು ಕೇಳಿಸಿಕೊಳಬೇಡಿ  ಸ್ವಾಮೀ... ತಾವು ತಮ್ಮ ಗಂಡಂದಿರ ಬೆನ್ನಟ್ಟಿಕೊಂಡು ಹೋಗುವದನ್ನು ಮರೆತಿರುತ್ತಾರೆ! 
ಹೌದು ಪಾಪ ಮದುವೆಯಾದ ಹೊಸತು. ತೀರಾ ಹೊಸ ಜೀವನ. ಭಾವನೆ ಪ್ರೀತಿಯ ಸಮ್ಮೋಹನ ಇರಬಹುದು. ಮೊದಲು ಕೈಗೊಂಡಾ ಹಾಗೆ ಬಸ್ ಟಿಕೆಟ್ ಮಾಡುವದಕ್ಕೋ... ಬಸ್ ಹತ್ತಿಸುವದಕ್ಕೋ... ಹೋಟೆಲ್ಗೂ... ಕೆಲವೊಮ್ಮೆ ಆಗದೆ ಹೋಗಬಹುದು...  ನೀವು ಕಲಿಯುವದು ಯಾವಾಗ? 

ಹೀಗೆಂದ ಮಾತ್ರಕ್ಕೆ  ಸಹೋದರಿಯರನ್ನು ಮರೆಯುವದು ಅಂತಲ್ಲ... ಅವರಿಗೂ ತಮ್ಮ ಹಾಗೆ ಇನ್ನೊದು ಹೆಣ್ಣು ಇಲ್ಲಿ ಬಂದಿದೆಯಲ್ಲಾ ಜೀವಿಸುವದಕ್ಕೆ ಅಂಥಾ ಒಂದು ಪ್ರಜ್ಞೆ ಇರಬೇಕು! 

ಇದಕ್ಕೆ ಇರಬೇಕು  ಬಹಳ ಧಾರಾವಾಹಿಗಳು ಈ concept  ಇಟ್ಟು ಬಂದಿರುವದು!
ತಮ್ಮನ , ಅಣ್ಣನ ಹೆಂಡತಿ ಬಂದಿದ್ದಾಳೆಂದರೆ ತಂಗಿಯರನ್ನು ಅಕ್ಕಂದಿರನ್ನು  ದೂರ ಮಾಡುವದಕ್ಕಲ್ಲ,  ಹಲೋ... ನೀವು ಬೇರೊಬ್ಬರ ಮನೆಗೆ ಕಾಲಿಡುವಾಗ ಇದೆ ವಿಷ ತುಂಬಿ ಹೋಗಬೇಡಿ ... ಹೋಗಿದ್ದರು  ಈ ವಿಷ ಹರಡಬೇಡಿ!


               ಅಣ್ಣ / ತಮ್ಮ ದೂರವಾದರೆ ? ನಿಮ್ಮಿಂದ ಈ ಕೆಲಸವೇ? 
               ಹೀಗೊಂದು  ಸಾಮಾನ್ಯ ಚಿಂತನೆ!


                  ಸಹೋದರತ್ವದ ಸದ್ಭಾವದಲ್ಲಿ....

                      ಚಂದ್ರಿಕಾ ಹೆಗಡೆ

02 ಮಾರ್ಚ್ 2011

ಬೆನ್ಹತ್ತಿ ಬರುವ ಸಂಗತಿಗಳು....2



ನನಗೆ ನಮ್ಮೂರೇ ಚೆಂದ. ಆ ವಾತಾವರಣದ ಮುದ-ಹದ , ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ನೀವು ಗಿಜಿಗುಟ್ಟುವ ನಗರದವರೆ? ನಿಮಗೆಲ್ಲಿ ಅರ್ಥವಾಗಬೇಕಿದೆ ಇದೆಲ್ಲ? " ರಜದಲ್ಲಾದರೂ ಹಳ್ಳಿಯ ಮಜಾ ಪಡೆಯಿರಿ" ಎಂಬ ಫಲಕ ನಿಲ್ಲಿಸಲೇ? ನನಗಿಷ್ಟವಿಲ್ಲ ಅದೆಲ್ಲ! ನೀವು ನಮ್ಮೂರಿಗೆ ಬರುವಾಗ ನಿಮ್ಮೊಟ್ಟಿಗೆ ತರುವ ಪ್ಲಾಸ್ಟಿಕ್ ..  ರೆಡಿ ಟು eat ..... ಅದರ  ಉಳಿದ ಬಳಿದ .... ಕಸಗಳು.... ನಾವೆಲ್ಲಿಡಬೇಕು. ನಿಮ್ಮಲ್ಲಿರೋ ಹಾಗೆ  ನಮ್ಮೂರಲ್ಲಿ ಕಸದ ತೊಟ್ಟಿ ಇಲ್ಲ... ನಾವು ಇಂಥಹ ಕಸಗಳನ್ನು  ಸೃಷ್ಟಿಸುವದೆ  ಇಲ್ಲ.  ಅಂದ ಹಾಗೆ , ನೀವು ತರಕಾರಿ , ಎಲೆ , ಸೊಪ್ಪುಗಳನ್ನು " waste " ಎಂಬ ಫಲಕದ ಕೆಳಗೆ ಬಿಸ್ಸಾಕುತ್ತೀರಂತೆ!  ಕೇಳಿದ್ದು ನಾನು ಬೇಸರಿಸಬೇಡಿ ಹಾ.... ನಿಮಗೇನು ತಿಳಿದಿದೆ ನಮ್ಮ ಎಮ್ಮೆ ,ಆಕಳು ... ಇವುಗಳಿಗೆಲ್ಲ ಅವೆಂದರೆ ಪಂಚ ಪ್ರಾಣ! ..... ಊಊಉಯ್  ಆಕಳು ಎಮ್ಮೆ , ಎಂದ ಕೂಡಲೆ ಸೆಗಣಿ ವಾಸನೆ ಎಂದು ಮೂಗನ್ನೇಕೇ  ಮುಚ್ಚಿಕೊಂಡಿರಿ ? ನಮ್ಮ ಮನೆಯ ನೆಲವನ್ನು  ಅದರಿಂದಲೇ ಸ್ವಚ್ಚಗೊಳಿಸುವದು. ಆ ನೆಲದ ಮೇಲೆ ಕುಳಿತು ಒಂದು ಇಷ್ಟವಾದ ಹಾಡನ್ನು ಗುಂಗುನಿಸುವ ಅವಕಾಶ ನಿಮಗೆಲ್ಲಿದೆ? ನೀವು ಮೋಸಾಯ್ಯಿಕ್ ನೆಲದ ಮೇಲೆ ನಡೆದಾದ ಹೋಗಿ ಜಾರಿರುತ್ತೀರಿ.!
                  ಏನೋ... ಕೇಳಿದ ಹಾಗಿತ್ತಲ್ಲ ... ಅಲ್ಲೆಲ್ಲೋ ನೀರಿನ ಆಟವನ್ನು ನೋಡುತ್ತಿರಂತೆ?  ಪ್ಲಾಸ್ಟಿಕ್ ಬಂಡೆಗಳ ಮೇಲೆ ವಿದ್ಯುತ್ ಸಂಪರ್ಕದಿಂದ ನೀರು ಬೀಳುವದನ್ನು ... ನಿಮ್ಮ taste ಗೂ ನಿಮ್ಮ ಕಣ್ಣಿಗೂ ನಮಸ್ಕಾರ.. ಅದೇನು.. ಹಸಿರು ಕೆಂಪು ಪ್ಲಾಸ್ಟಿಕ್ ಹಾಳೆಗಳ ಮೇಲೆ  ಜಾರುತ್ತ  ಮಜಾ ಅನುಭವಿಸುತ್ತಿರೀ?  ಹೇ... ನಿಮ್ಮ ... ನಮ್ಮೂರಿನ ನದಿ ಹಳ್ಳ, ತೊರೆ,, ಝರಿ ...ನೋಡ ಬೇಕೂ ..... ಅಡಿಕೆ ಹಾಳೆಗಳ ಮೇಲೆ ಕುಳಿತು ಇಳಿಜಾರಿನಲ್ಲಿ ಜಾರುತ್ತ ಹೋಗಲೂ ಧೈರ್ಯ  ಬೇಕು. ಪುನರ್ಪುಳಿ ಎಲೆಗಳ ನಡುವೆ ಒಂಚೂರೂ ಉಪ್ಪು ಇಟ್ಟು ಸವಿಯಲು ಆ ಬಾಲ್ಯವೇ ಬರಬೇಕು. ಹಸಿ ತೆಂಗಿನ ಗರಿಯಲ್ಲಿ  " watch " ಮಾಡಿ ಕೊಡಲೂ ಅಂದಿನ ಸ್ನೇಹಿತರೇ ಬರಬೇಕು...
                                                                                 ನಮ್ಮುರಲ್ಲನ್ತೂ ಮಾತಿಲ್ಲ!  ಅದೇನೂ ಮಾತಿಲ್ಲದ ಊರು ಅದ್ಯಾವ ಊರು ? ವಿಚಿತ್ರಪಾ ಅಂತ ಹೇಳಿ ... ಭಯ ಬೀಳಬೇಡಿ.... . ಅಂದ್ರೆ ನಮ್ಮೂರಲ್ಲಿ ನೀವು ಈಗ ಮಾತಾಡ್ತಾ ಇದ್ದಿರಲ್ಲ ... ಕಿವಿ ಹತ್ರ ಅದೇನೋ ವಸ್ತು ಇಟ್ಟು < ಮೊಬೈಲ್ ಅಂತೆ> ,,, ಸುಮ್ಮ ಸುಮ್ಮನೆ  ನಗ್ತಾ , ನಾಚಿಕೊಳ್ತಾ, ಕೈ, ಬಾಯಿ , ಮಾಡ್ತಾ ಇರೋದು, ಇವೆಲ್ಲ ನಮ್ಮೂರಲ್ಲಿ ಇಲ್ಲಾ... ನಾವು  ಪಕ್ಕದ ಮನೆಯವರ ಹತ್ತಿರ ಮಾತನಾಡಬೇಕು ಅಂದ್ರೆ ಹೇ,,, ಹೋ... ಓಯ್,,, ಕೂಹೂ.. ಏ, ,,,, ಇವುಗಳನ್ನೇ,, ಬಳಸೋದು.  ಏನಂದ್ರೂ ನಮ್ಮೂರಲ್ಲಿ ಏಕಾಂತ ಇದೇರಿ. ನಿಮ್ಮೂರಲ್ಲಿ ಎಷ್ಟು ದುಡ್ಡು ಕೊಟ್ರು ಇದು ಸಿಗೊದಿಲ್ಲಂತೆ !. ಈಗ ನಿಮ್ಮೂರಿಗೆ ನಾನು ವಿಚಿತ್ರ ಊರು ಅಂತ ಹೇಳಬೇಕಾಯಿತು.
                          .............. ಏನೋ ತಮ್ಮೂರನ್ನು ಹೊಗಳಿಕೊಂಡು ಇದೆಲ್ಲ ಹೇಳ್ತಾ ಇದಾಳೆ ಅಂತ ಅಸಡ್ಡೆಯಿಂದ ಕೂಡ ಬೇಡಿ. ನಮ್ಮ ಹಳ್ಳಿ ನಿಮ್ಮೂರ < ಈಗ ಯಾರನ್ನು ಕೇಳಿದ್ರು ಬೆಂಗಳೂರು .....>ಹಾಗೆ ಆಗ್ತಾ ಇದೆ ಅನ್ನೋದು ನನ್ನ ಈ  ವಿಚಾರಕ್ಕೆ ಕಾರಣ .

                         ಇನ್ನೂ... ಇದೆ...
ಚಂದ್ರಿಕಾ ಹೆಗಡೆ

01 ಮಾರ್ಚ್ 2011

ಮೋಡದ ಮರೆಯಲ್ಲಿ ಕದ್ದು ಮುಚ್ಚಿ ನೋಟ- ಆಟ!


ನಿನ್ನೆ ಮಗನ ಜೊತೆಯಲ್ಲಿ ಮನೆಯ ಮೇಲೆ  ಹೀಗೆ ಆಟವಾಡುತ್ತ ಇದ್ದೆ ... ನನ್ನ ಮಗ "  ಅಲ್ಲಿ ಚುಲ್ಯಾ" ಅಂದಾ ... ಒಮ್ಮೆ ದೃಷ್ಟಿ ಹರಿಸಿದೆ. ಒಳ್ಳೆ ಆಟ ಅಲ್ಲೂ ಇತ್ತು... handicam ತೆಗೆದುಕೊಂಡು ಬಂದೆ... ಅಲ್ಲಿಂದ ಶುರು!   






    

ತೆಗೆಯುವದೆ ತಡ!
ಅದೆಲ್ಲಿಂದಾ ಉಮೇದು ಬಂತೂ ಸೂರ್ಯಂಗೇ! 
ನೋಡಿ ಹೀಗೂ



ಚೂರಾದ ಚಪಾತಿಯ ಹಾಗೆ!


ಇದೆಂತೂ... ಸ್ಕ್ಯಾನಿಂಗ್ ನಲ್ಲಿ  ನಾನು ಮಗುವಿನ ಬೆಳವಣಿಗೆ ನೋಡಿದ ನೆನಪು ಬಂದಿತು.


ಇದಕ್ಕೇನು... ಐಸ್ಕ್ರೀಂ ಕಪ್ ನಿಂದಾ ಒಂದು ಹನಿ ಜೊತೆಯಲ್ಲಿ ಅದರ ಬಣ್ಣ ಸೇರಿಸಿಯೇ ಬಿದ್ದ ಹಾಗೆ!



ಮೀನಿನ ಹಾಗೆ! ಯಾವುದೋ ದೃಷ್ಟಿ!

ನಾನು ಇದ್ದೇನೆ!


ಮತ್ತೆ! ಎಲ್ಲಿ?



ಇಷ್ಟು ಹೊತ್ತಿಗೆ ಇವನ ಆಟ ಮುಗಿದಿರಬೇಕು ಅಂಥಾ ಲೆನ್ಸ್ ಕ್ಲೋಸ್ ಮಾಡಿ ಹೊರಟಿದ್ದೆ... ಇದನ್ನೇ ನೋಡುತ್ತಿದ್ದ ನನ್ನ ಮಗ ಮತ್ತೆ ಚುಲ್ಯಾ ಮಮ್ಮ ಅಂದಾ 



ಶುರುನಾ....
ಬಣ್ಣದ ಬೆರಗು ಆರಂಭವಾಯಿತು!

ಇದು ಒಂದು brunada ತರಹ ಕಂಡಿತು..!


.ಆಬ್ಹಾ! ಇದೆಂತದು... 

ಬೆಂಕಿಯ ಉಂಡೆ!

ಕಾನವಾಸ್ನಲ್ಲಿ ಹಾಗು ಹೀಗು ಎರಚಿದ ಬಣ್ಣಗಳೇ!

ಹೀಗೆ ವಿಚಾರಿಸುತ್ತಿರುವಾಗಲೇ  ನಾಳೆ ಬರುತ್ತೇನೆ ಎಂದಾ ಆಟಗಾರ ....
....... ಪಾಪುಗೆ ನಿನ್ನ ಚುಲ್ಯಾ ನಾಳೆ ಬತ್ತ... ಅಂದು  ಮನೆಗೆ  ಮೆಟ್ಟಿಲು ಇಳಿಯತೊಡಗಿದೆವು...



                                               ಚಿತ್ರವಿಚಿತ್ರಾ ಭಾವಗಳೂ..... ಆಕಾಶದಲ್ಲಿ....
                                               ಸಚಿತ್ರ ಸತ್ಯದ ಸಂಭ್ರಮದಲ್ಲಿ 
                                              ಚಂದ್ರಿಕಾ ಹೆಗಡೆ