28 ಫೆಬ್ರವರಿ 2011

ಕಾರಣ ಗೊತ್ತಿಲ್ಲ !

   ಸುಮಾರು  ೧೪-೧೫ ವರ್ಷಗಳ ಹಿಂದಿನ ಮಾತು ...
 ಪ್ರೌಢ  ಶಾಲೆಯ ದಿನಗಳ  ನೆನಪು...
ನನಗಂತೂ 'ಹುಡುಗರು' ಶತ್ರುಗಳಂತೆ ಆಗಿದ್ದರು. ಕಾರಣ? ಹುಡುಗರ ಹತ್ತಿರ ಮಾತನಾಡಲು ಒಂದಿನಿತೂ ಭಯವಿರಲಿಲ್ಲ. ಮಾತನಾಡಿದ್ದೆ ೧೦-೧೨ ಸಲ! 
ಕಾರಣ ಕೇಳಿದರೆ ಗೊತ್ತಿಲ್ಲ!
ನಾನು ಯಾವಾಗಲೂ cultural champion ಆಗಿರ್ತಾ ಇದ್ದೆ. ಅದೆಷ್ಟೂ ಮೊದಲುಗಳ ಒಡತಿಯಾಗುತ್ತಿದ್ದೆ.  ಆದರೆ ಇಂಗ್ಲಿಷ್  ಭಾಷಣ ಹಾಗು ಪ್ರಬಂಧದಲ್ಲಿ ಮಾತ್ರ ಎರಡೋ ಮೂರನೆಯದೋ ಸ್ಥಾನ!  ಅದೇನೂ ನಿನಗೆ ಎಲ್ಲ ಸಿಗಬೇಕಾ ಅಂಥಾ ಕೇಳಬೇಡಿ?  ಏಕೆಂದರೆ  ಎಲ್ಲರೂ ಒಪ್ಪಿಕೊಳ್ಳೋ ಸತ್ಯವಾಗಿತ್ತೂ... ಏನೆಂದರೆ ನನ್ನ ಅಮ್ಮ ಅಲ್ಲಿ ಇಂಗ್ಲಿಷ್ ಟೀಚರ್ ... ಏನಾದರೂ ನನಗೆ ಮೊದಲ ಸ್ಥಾನ ನೀಡಿದರೆ  ತನ್ನ ಮಗಳಿಗೆ  ತಾರತಮ್ಯ ಮಾಡಿ ಕೊಟ್ಟಳು ಎಂಬಾ ಅಪವಾದಕ್ಕೆ ಗುರಿಯಾಗಬೇಕಲ್ಲ!  ಆದ್ರೆ ನನ್ನ ಮನಸ್ಥಿತಿ ಹೇಗಿರಬಹುದು.... ಇದು ದೂರಲ್ಲ! 
ಅಬ್ಭಾ! ನನ್ನ ಉತ್ತರ ಪತ್ರಿಕೆಗಳಿಗೆ ಅದೆಷ್ಟು ಬೇಡಿಕೆ? ತೂಗಿ ಅಳೆದು ನೋಡಲು! ಎಲ್ಲಾದರೂ ಮಾರ್ಕು ಹೆಚ್ಚಿಗೆ ಹಾಕಿದ್ದರಾ ಅಂಥಾ... ಅದೇನೂ ಪರೀಕ್ಷೆಯ ಆಸಕ್ತಿ ಕಳೆದುಕೊಳ್ಳಲು ಇದೊಂದೂ ಕಾರಣನಾ?  ಯಾಕೆಂದ್ರೆ ಅಂಥಾ ಜೊತೆಗಾರರು ನನ್ನಿಂದ ದೂರವಾದ ಮೇಲೆ ನಾನು ಪರೀಕ್ಷೆಯಲ್ಲಿ ಇವತ್ತಿನವರೆವಿಗೂ ಅತ್ಯಾಸಕ್ತಿ ಹೊಂದಿರುವದು!  ಈ ಎಲ್ಲ ಕೆಲಸಗಳು ಹುಡುಗಿಯರದ್ದೇ.ಹುಡುಗರದಲ್ಲ.ಆದರು ಅವರ ಹತ್ತಿರ ಮಾತನಾಡುತ್ತಿರಲಿಲ್ಲ!
ಗಣಿತದ ವಿಷಯದಲ್ಲೂ ಅಷ್ಟೇ ... ನಾನು ಇದರಲ್ಲಿ ಸ್ವಲ್ಪ ಹಿಂದೆ... ಪ್ರಯತ್ನ ವಿಲ್ಲದ  ಹಿಂದೆ ಬೀಳುವಿಕೆ.. ಹಾಗಂತಾ ೬೦-೬೫  ಯಾವಾಗಲೂ... ನನ್ನ ಅಪ್ಪ ಗಣಿತವನ್ನು ಹೇಳಿಕೊಡುತ್ತಿದ್ದರು.. ಬೋರ್ಡ್ ನಲ್ಲಿ ಗಣಿತವನ್ನು ಬಿಡಿಸಲು ಹೇಳಿದಾಗ ನಾನು ತಲೆಕೆರೆಯುವದೆ! ಹುಡುಗರು ಹಿಂದಿನಿಂದಲೇ  ಹೇಳಿಕೊಡುತ್ತಿದ್ದರು.. ಗ್ರಹಿಸಿ ನಾನು ಬಿಡಿಸುತ್ತಿದ್ದೆ ಇದು ಇಂದಿಗೂ ನನ್ನ ಅಪ್ಪನಿಗೆ ನಂಬಲಾರದ ಸತ್ಯ!ಆದರೂ ಅದೇಕೆ ಅಸ್ಟು ದ್ವೇಷ  ಕಾರಣ ಗೊತ್ತಿಲ್ಲ. 
ಮಾತನಾಡುತ್ತೇನೆ.. ಈಗ ಸಿಕ್ಕಾಗಲೆಲ್ಲ. ಕೆಲವೊಬ್ಬರು ಇಂದಿಗೂ ಆಶ್ಚರ್ಯ ಪಡುತ್ತಾರೆ. ಇವಳು  ಅದ್ಹೇಗೆ ಬದಲಾದಳೆಂದು? ಇನ್ನು ಕೆಲವರು ಸಿಗಬೇಕು... ನಾನು ಅವರ ಹತ್ತಿರಾ ಹರಟಬೇಕು... ಅವರ ತಲೆಯಲ್ಲಿ ಹುಳ ಬಿಡಬೇಕು... 
ಮಾತನಾಡಿಸುತ್ತೇನೆ ನನ್ನ ಮೇಲೆ ಯಾವ ಕೆಟ್ಟದೃಷ್ಟಿಯಿಂದಲೂ ನೋಡದ  ಆ ಹುಡುಗರನ್ನು!

                                ಕಾರಣದ ಹುಡುಕಾಟ ಬಿಟ್ಟು...
                                ಚಂದ್ರಿಕಾ ಹೆಗಡೆ


21 ಫೆಬ್ರವರಿ 2011

ನಗು !





ಕೆಲವೊಬ್ಬರಿರುತ್ತಾರೆ- ಗಂಭೀರ ಮುಖಭಾವ, ಅಲ್ಲಲ್ಲಿ ಕಿಂಚ್ಚಿತ್ತಾದರೂ ನಗು! ದೇವರಾಣೆಗೂ ದೊರೆಯುವದಿಲ್ಲ. ಹಲ್ಲು ಬೆಳ್ಳಗಿದೆಯೇ ಇಲ್ಲಾ ಇವತ್ತೇ ದಂತ ಚಿಕಿತ್ಸಾಲಯಕ್ಕೆ ಹೋಗುವ ಅನಿವಾರ್ಯತೆ ಇದೆಯೇ! ಉಹುಉಂ ತಿಳಿಯುವದೇ ಇಲ್ಲ. ಅಷ್ಟು ಬಿಗಿ ಬಂದೋಬಸ್ತ್. ಅವರ ಹತ್ತಿರ ಕೋಟಿಗಟ್ಟಲೆ ಹಣ ಕೊಳೆಯುತ್ತಿದ್ದರೂ ನಗುಸುವಾಸನೆ ಹತ್ತಿರವೂ ಸುಳಿಯುವದಿಲ್ಲ. ಗಂಭೀರವೋ , ಭಯವೋ , ಅಥವಾ ಹಿಂಜರಿಕೆಯೋ... ಒಟ್ಟಿನಲ್ಲಿ ನಮ್ಮಂಥಹವರು ಅವರಿಗೊಂದು ಹೆಸರು"ಸುಡು ಸುಡು ಮುಖದವನು... ಒಂದು ಚೂರು  ನಗು ಹುಟ್ಟೋದಿಲ್ಲ, ಒಣ ಮುಖ" ಎನ್ನುತ್ತೇವೆ.
ಬಹಳಷ್ಟು  ಜನರಿರುತ್ತಾರೆ_ ನಗು ಮುಖ, ಹಲ್ಲು ಬೆಳ್ಳಗಿರಲಿ, ಅಥವಾ ಹಿಂದಿನ ವರ್ಷವೇ  ದಂತ ವೈದ್ಯರ ಹತ್ತಿರ ಹೋಗಬೇಕಿತ್ತು ಎಂಬ  ಅನಿವಾರ್ಯತೆ ಇದ್ದರೂ ಮುಖದಲ್ಲಿ ಒಂದಷ್ಟು ನಗು ಚಿಮ್ಮಿಸುತ್ತಾರೆ... ಪರಿಚಯದ ನಗು, ಮಂದಹಾಸ, ಇವರನ್ನು ನೋಡಿದರೆ ಇನ್ನಷ್ಟು ಮಾತನಾಡಬೇಕೆಂಬ ಬಯಕೆ... ಏನೋ ಆತ್ಮೀಯತೆ-ಸಲುಗೆ, ಭಾವನೆಯ ಹಂಚುವಿಕೆ, ಭಾವುಕತೆಯ ಕ್ಷಣ .... ಹೀಗೆ ಸ್ನೇಹತ್ವದ ಗುರುತು. ಇಂತಹವರ ಹತ್ತಿರ ಏನೇನೂ ಹಿಂಜರಿಕೆಯಿಲ್ಲ. ನಗುವ - ದುಃಖ ಶಮನಗೊಳಿಸುವ  ಮನಸು ಇವರದು.
ಗಂಭೀರ ವದನದ ಹೆಸರನ್ನು ಹೊತ್ತ ಕೆಲವರು.... ಸೂಕ್ಶ್ಮವಾಗಿ ಇನ್ನೊಬ್ಬರನ್ನು ಗಮನಿಸುತ್ತಾ ಅವರ ಹಿಂದಿನಿಂದ  ಆಡಿಕೊಳ್ಳುತ್ತಾರೆ. ಬೇಕಾದಲ್ಲಿ ಇಡಬೇಕಾದ"ಚುಚ್ಚುಗಳನ್ನು "ಆಳವಾಗಿಯೇ ನೆಟ್ಟಿರುತ್ತಾರೆ. ಬಿಚ್ಚುಮನಸಿಗರಲ್ಲದ ಇವರು ವಿಚಿತ್ರ.! ಹೀಗೆ ನಮ್ಮ ಪರಿಚಯದ ಒಬ್ಬ ಹೆಣ್ಣುಮಗಳು ಹೆಚ್ಚು  ಮಾತಾಡುವದಿಲ್ಲ. ಮುಖ ನಿರ್ಲಿಪ್ತವೋ , ಗಂಭೀರವೋ... ನಾ ಅಂದುಕೊಂಡಿದ್ದೆ ಅವಳ ಸ್ವಭಾವವೇ ಹೀಗೆ _ಅಷ್ಟು ಮಾತನಾಡುವದು ಇಷ್ಟವಾಗುವದಿಲ್ಲವೋ  ಏನೋ ಎಂದು.<  ಏಕೆಂದರೆ ನನ್ನ ಬಳಿ ಅವಳ ವರ್ತನೆ ಹೀಗೆ ಇತ್ತು. ನಾನು ಅವಳಿಗಿಷ್ಟವಿಲ್ಲವೆಂದು ಮುಂದೆ ಅವಳು ಸಿಕ್ಕಾಗೆಲ್ಲಾ ಹಾಯ್ ಎಂದು ಸುಮ್ಮನಿರುತ್ತಿದ್ದೆ. ಆಮೇಲೆ ಗೊತ್ತಾಯಿತು ಅವಳ ಸ್ವಭಾವ... ನನ್ನ ಬಗ್ಗೆ ಇಲ್ಲ ಸಲ್ಲದನ್ನು ಹೇಳಿ ಹೇಳಿ.... > ಸ್ವಾಮೀ ಅವಳು ಸುಮ್ಮನಿರುತ್ತಾಳೆ ಎಂಬುದು ಶುದ್ಧ ಸುಳ್ಳು. ಅವಳು ಒಮ್ಮೆ ಅವಳ ಸಂಬಂಧಿಕರಿಗೆ  <!> ಫೋನಾಯಿಸುವದನ್ನು ನಾನು ಗಮನಿಸಿದ್ದೆ. ಅದೆಷ್ಟು ಮಮಕಾರ, ಆತ್ಮೀಯ ಬೆಸುಗೆ, ನಗು-ಹಿತೈಷಿ.... ಅಂದಿನಿಂದ ಅವಳ ಬಗೆಗೆ ಕಾಲ ಹೇಳಬೇಕು ಎಂದುಸುರುತ್ತೇನೆ!
ಇನ್ನೂ ಕೆಲವರು ನಗುತ್ತಾರೆ, ಹಿಂದಿನಿಂದ ಬೇರೇನೋ ಆಡಿಕೊಳ್ಳುವರು. ಇವರಿಗೆ ದಂತ ಚಿಕಿತ್ಸೆಯ ಅವಶ್ಯಕತೆಯೇ ಇಲ್ಲ. ! ಅಯ್ಯೋ ಇಂಥವರನ್ನುಸುಖಾಸುಮ್ಮನೆ ಅವಲಂಬಿಸಬೇಡಿ. ನಿಮ್ಮ ಹತ್ತಿರ "use and throw    " ತರಹ ವರ್ತಿಸಬಹುದು. ಕೆಲಸವಾಗುವವರೆಗೆ ಮಾಡಿಸಿಕೊಂಡು<ಪುಗಸಟ್ಟೆ> ನಂತರ ತಮ್ಮ  stop <ಜೀವನ!> ಬಂದಾಗ ಸದ್ದಿಲ್ಲದೇ ಮರೆಯಾಗಿ, ನಿಮ್ಮ ಕುರಿತು ಇಲ್ಲಸಲ್ಲದ ಹೇಳಿಕೆ, ವಿರೋಧಿಭಿಪ್ರಾಯಗಳ  ಫಲಕಗಳನ್ನು ಹಾಕಿಯೇ ಬಿಡುತ್ತಾರೆ! ಎಲ್ಲಿ ತಮ್ಮಿಂದ ಕೆಲಸ , ಸಹಾಯ ಕೇಳಿದರೆ?  ಸದ್ದಿಲ್ಲದೇ ಮದ್ದನ್ನು ಅರೆಯುವರು ಈ ಜನರು!

                    ಅನುಭವದ ಮೂಸೆಯಿಂದ ಹೊರಹಾಕಲ್ಪಟ್ಟಿದೆ.... 
                                                             ಚಂದ್ರಿಕಾ ಹೆಗಡೆ     

19 ಫೆಬ್ರವರಿ 2011

ನನ್ನ ಓದು..

                
                             ಕೈಲಾಸಂ ಅವರ "ಟೊಳ್ಳು ಗಟ್ಟಿ" 



ಕನ್ನಡ ಸಾಮಾಜಿಕ ನಾಟಕ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿದ ಕೀರ್ತಿ  ಕೈಲಾಸಂ  ಅವರಿಗೆ ಸಲ್ಲುತ್ತದೆ .ಸಮಕಾಲಿನ ಸಮಸ್ಯೆಗಳ ಗಂಭೀರ ಚರ್ಚೆ ಹಾಗು ಪರಿಶೋಧನೆಯನ್ನು  ಅವರ ನಾಟಕಗಳಲ್ಲಿ ಗುರುತಿಸಬಹುದು.
ಕೈಲಾಸಂ ಈ ನಾಟಕದಲ್ಲಿ ತಮ್ಮನ್ನು "ಪ್ರಹಸನ ಪಿತಾಮಹ" ಎಂದು ಕರೆದುಕೊಂಡಿದ್ದಾರೆ .ಸಮಕಾಲೀನ ಸಮಾಜದ ಅಂಕುಡೊಂಕುಗಳನ್ನು ಹಾಸ್ಯಮಯವಾಗಿ  ಚಿತ್ರಿಸಿರುವದನ್ನು ಕಾಣಬಹುದು. ಹಾಸ್ಯದ ಮೂಲಕ ಬದುಕಿನ ಗಂಭೀರ ವಿಶ್ಲೇಷಣೆಯನ್ನು ನಡೆಸುತ್ತಾರೆ. 'ಬದುಕಿನಲ್ಲಿ ಎದುರಾಗುವ ಕಣ್ಣೀರಿನ ಕಡಲನ್ನು ಹಾಸ್ಯದ ಹರಿಗೋಲಿನಿಂದ ದಾಟಬೇಕೆಂಬುದು  ಕೈಲಾಸಂರವರ ಆದರ್ಶವಾಗಿತ್ತು'
 "ಟೊಳ್ಳುಗಟ್ಟಿ" ಕೈಲಾಸಂ ಅವರ ಎಲ್ಲ ನಾಟಕಗಳ ಆಶಯವನ್ನೂ ಪ್ರತಿನಿಧಿಸುವಂಥಹ ನಾಟಕವಾಗಿದೆ. ಪಾಶ್ಚಿಮಾತ್ಯ ಪ್ರಭಾವದಿಂದ ಪುರಾತನ ಭಾರತೀಯ ಸಂಸ್ಕ್ರತಿಯನ್ನು.... ಅಲ್ಲೋಲಕಲ್ಲೋಲ ಮಾಡಿದ ಕ್ರಮ.. ಜನಜೀವನದ ವೈಪರೀತ್ಯ.. ಹೀಗೆ ಆಧುನಿಕ  ಜಗತ್ತೂ... ಆಧುನಿಕ  ಶಿಕ್ಷಣದ  ಎಲ್ಲ ಸಾಧ್ಯತೆಗಳನ್ನು ಅನಾವರಣ ಮಾಡುವ ಶೈಲಿ ಇಷ್ಟವಾಗುತ್ತದೆ.
"ಟೊಳ್ಳುಗಟ್ಟಿ"ಯ ಹಿರಿಯಣ್ಣಯ್ಯ ನ ಮಕ್ಕಳಾದ ಪುಟ್ಟು , ಮಾಧು- ಎರಡು ವೈರುಧ್ಯದ ಪಾತ್ರಗಳು!ತಂದೆಯ ಪ್ರೀತಿ ಪಾತ್ರನಾದ   ಪುಟ್ಟು.. ಓದಿನಲ್ಲಿ ಮುಂದು.ಬದುಕಿನಲ್ಲಿ ಸ್ವಾರ್ಥಿ. ಓದಿನಲ್ಲಿ ಹಿಂದೆ ಉಳಿಯುವ .. ಉಳಿದಿದ್ದ ಮಾಧು.. ಪರೋಪಕಾರಿ.
ಈ ಎರಡು ವಿಭಿನ್ನ ಪಾತ್ರಗಳ ಮೂಲಕ ಈ ನಾಟಕವನ್ನು ಹೆಣೆಯಲಾಗಿದೆ. ಪುಟ್ಟುವಿನ ಹೆಂಡತಿ ಪಾತು... ಮಾಧುವಿನ ಹೆಂಡತಿ ಸಾತು... ಅವರ ಮಾತುಕತೆಗಳು... ತುಂಬಾ ಸ್ವಾರಸ್ಯಕರವಾಗಿದೆ . ಇವರ ಮನೆಗೆ ಬೆಂಕಿ ಬೀಳುವ ಸನ್ನಿವೇಶ " ಅಗ್ನಿಪರೀಕ್ಷೆ" ಯಂತಿದೆ . ಈ ಜೀವನ ಪರೀಕ್ಷೆಯಲ್ಲಿ  ಮಾಧೂ ನಾಯಕನಂತೆ ಕಾಣಿಸುತ್ತಾನೆ!. ಮನೆಗೆ ಬೆಂಕಿ ಬಿದ್ದಿದೆಯೆಂದು ತಿಳಿದ ತತ್ ಕ್ಷಣ ರೋಗಿಯಾದ ತಾಯಿಯನ್ನು, ಹಸುಳೆಯನ್ನು  ಲೆಕ್ಕಿಸದೆ ತನ್ನ ಪುಸ್ತಕವನ್ನಷ್ಟೇ ಬಾಚಿಕೊಂಡು ಪುಟ್ಟು ಹೊರಕ್ಕೆ ಓಡುತ್ತಾನೆ. ಮಾಧು  ಮನೆಯವರನ್ನು ರಕ್ಷಿಸಲು ತನ್ನ ಜೀವದ ಹಂಗು ತೊರೆದು ಹೋರಾಡುತ್ತಾನೆ.

ಈ ನಾಟಕವನ್ನು ಓದಿದಂತೆ ಇಲ್ಲಿರುವ ಪಾತ್ರಗಳು ನಮ್ಮ ಮನೆಯಲ್ಲೋ ... ಪಕ್ಕದ ಮನೆಯಲ್ಲೋ... ಒಟ್ನಲ್ಲಿ ನಮ್ಮ ಸುತ್ತಮುತ್ತ ನಡೆಯುವ ಘಟನೆಏನೋ... ಅನ್ನುವಷ್ಟು.. ಹತ್ತಿರವೆನಿಸುತ್ತೆ.  ಕೈಲಾಸಂ ಅವರ ಭಾಷೆ..ಶೈಲಿ... ಇಷ್ಟವಾಗತ್ತೆ. " ಪಾಶ್ಚಾತ್ಯ ಪ್ರಭಾವದಿಂದ ಒಮ್ಮೊಮ್ಮೆ ಬೆಂಕಿ ಬಿದ್ದ ಮನೆಯಂತಾಗಿರುವ ನಮ್ಮ ಮನಸು... ಆಶೆ ... ಅಂತಸ್ತುಗಳು... ಸಮಾಜ... ಇವೆಲ್ಲವನ್ನೂ ಸುಸೂತ್ರವಾಗಿ ಒಳ್ಳೆದಾರಿಗೆ ಕೊಂಡೊಯ್ಯಲು ಮಾಧುವಿನಂಥಹ ಧೀರರು ಅವಶ್ಯಕ.. ಪುಟ್ಟುವಿನಂಥಹ ಪುಸ್ತಕದ ಹುಳುಗಳು ಅಲ್ಲಾ ಎಂಬುದನ್ನು ಈ ನಾಟಕ ಚೆನ್ನಾಗಿ ಧ್ವನಿಸುತ್ತದೆ.

                                                         ಇನ್ನು ಗ್ರಹಿಕೆಯ ಅಡಿಯಲ್ಲಿ  ಚಿಂತನೆ .... ನಡೆಯುತ್ತಿದೆ....
                                                            ಚಂದ್ರಿಕಾ ಹೆಗಡೆ



17 ಫೆಬ್ರವರಿ 2011

ಅವಳ ..... ಘಳಿಗೆಗಳು!

         


ಅತ್ತು ಕಣ್ಣೆಲ್ಲ ಇಂಗಿಹೋಗುವ ಸಮಯದಿ
ನಿನ್ನ ಆಗಮನ
ಇರುವ ಕಣ್ಣೀರೆಲ್ಲ ಆರಿಹೋದ ಮೇಲೆ
ಕಣ್ಣಿನಲ್ಲಿಲ್ಲ ನೀರು
ನಿನ್ನ ಸಡಗರವ ನೋಡಲೂ ಅಸಹಾಯಕಳು
ಕಗ್ಗತ್ತಲು ಕವಿದಿದೆ ಜೀವನ ಯಾನ!

ವಿಚ್ಚಿನ್ನ  ಮನ, ನಿನ್ನ ಸಾಂತ್ವನ ಭದ್ರ
ಬತ್ತಿಹೋದ ಕಣ್ಣಿನಲ್ಲೀಗ  ಜೀವ ಜಲಧಾರೆ
ಪ್ರೀತಿ ಅಮರ ದುಃಖ  ಕ್ಷಣಿಕ
ಸಹಬಾಳ್ವೆ ಸಮರಸ ಜೀವನ ತಂತ್ರ....
                                                      ಮನದ ದಿಟ್ಟ ಭಾವನೆಯ ಜೊತೆ ಭದ್ರ ಹೆಜ್ಜೆಯಲ್ಲಿ .........
               ಚಂದ್ರಿಕಾ ಹೆಗಡೆ
                                      

15 ಫೆಬ್ರವರಿ 2011

ಕಲ್ಲೂ ಮಾತಾಡಿತು

  ದೂರದ ನಾವೆಯೊಂದರಲ್ಲಿ ನೀ
ಕಾಯುತ್ತಿದ್ದೆ ಆವಾಗಿನಿಂದಲೇ
ಹುಟ್ಟು ಹಾಕಲು ಅರಿಯದೆ
ಕಂಗಾಲಾಗಿದ್ದೆ ಸಮುದ್ರ ತೀರದಲ್ಲಿ ...
ಅತ್ತಲೆಲ್ಲಿಂದಲೂ ಆಕೆಯ ಛಾಯೆ
ಬಂದಳೋ.. ಇಲ್ಲವೇ ಹೋದಳೋ...
ನಾ ಅರಿಯೆ !
ಸ್ಥಿತಪ್ರಜ್ಞನಂತೆ, ಕಾವಲಿನವನಂತೆ
ಕಾಲೂರಿ ಮರಳುಗಳಡಿಯಲ್ಲಿ ನನ್ನ ಬೇರಿತ್ತು! ಅಷ್ಟೇ....
ಭಾವ ಸಂಚಾರವಾದಂತಾಗಿ
ಇದ್ದಲ್ಲಿಯೇ ಕಣ್ಣಿಲ್ಲದ ವಿಷಯ
ಮರೆತೇ ಹೋಗುವಷ್ಟು ದರ್ಶನವಾಗಿತ್ತು.

           ನಿನ್ನಿಂದ ಆಚೆ ಹೋದ ಹುಡುಗಿ!!
ತನ್ನ ಮೊಮ್ಮಗುವಿನೊಂದಿಗೆ!
ಇದೆ ತೀರಕ್ಕೆ , ನನ್ನ ಮೇಲೆ ಕುಳಿತಳು.
ಪಕ್ಕದ "ಅಜ್ಜ" ನೀನಾ?
ನೋಡತೊಡಗಿದೆ ಅವಳ ಮುಖದ ನೆರಿಗೆಗಳನ್ನು!
ಅಡಗಿಹೋದ ನಿನ್ನನ್ನು
ನಿನ್ನಷ್ಟೇ ಎಷ್ಟೋ ಮುಗ್ಧಜನರನ್ನು!
ಸಧ್ಯ ಯೌವನವಿಲ್ಲ- ಅಷ್ಟು ಸಾಕು.....

14 ಫೆಬ್ರವರಿ 2011

ನನ್ನ ಮಗನ ಮೊದಲ ಹಾಡು

ಹೇಳಬೇಕೆನಿಸಿದ್ದು...
ಚಿಕ್ಕ ಮಕ್ಕಳಲ್ಲಿರುವ ಕ್ರಿಯಾತ್ಮಕತೆ  <creativity > ಯನ್ನು ನೋಡಿ ಬೆರಗಾಗುವ ಎಷ್ಟೋ ಸಂದರ್ಭಗಳು ನನ್ನ ಜೀವನದಲ್ಲಿ ಒದಗಿವೆ.  ನಾನು ಚಿಕ್ಕವಳಿದ್ದಾಗ  ಅಂದ್ರೆ ಸುಮಾರು ೭ ನೆ ತರಗತಿಯಿಂದ ಹಿಡಿದು... ಪಕ್ಕದ ಮನೆಯ ಮಕ್ಕಳನ್ನು  ನೋಡಿ ಅವರನ್ನು ತೀರಾ ಹತ್ತಿರದಿಂದ ನೋಡಿ ಹಲವು ಬೆರಗು ಮೂಡಿತ್ತು... ನಾನು ಕಲಿಸಿದ ಎಷ್ಟೋ ಹಾಡು ಅವರ ಬಾಯಲ್ಲಿ ಬೇರೇನೋ ಸಾಹಿತ್ಯದಲ್ಲಿ ಬಂದಿದ್ದನ್ನು ಕಂಡಿದ್ದೆ. ಕಲಿಸಿದ  ಹೆಜ್ಜೆ ಏನೇನೋ  ಬೇರೆ ಹೆಜ್ಜೆಗಳಲ್ಲಿ  ನರ್ತಿಸುವದನ್ನು ನೋಡಿ ಅಬ್ಭಾ ಎಂದಿದ್ದೆ... ಈಗ ಮನೆಯ ಮಗುವಿನಲ್ಲಿ ನೋಡುವ ಸಂದರ್ಭ .... ವಾಹ್... ಎನ್ನುವ ಸಮಯ... ಹೆತ್ತವರಿಗೆ ಹೆಗ್ಗಣ ಮುದ್ದು ... ಎನ್ನಿಸಿದರೂ ಸರಿ... ಹೇಳಲೇ ಬೇಕು... ನಾನು ಈ ಮೊದಲೇ ಹೇಳಿದ ಹಾಗೆ ನಾನು ಭಾವನೆಯ ಜೊತೆಯಲ್ಲಿ ಹೆಜ್ಜೆ ಹಾಕುವವಳು ....
ನಾನು ರಚಿಸಿದ ಕವನ :
ಚಂದಮಾಮ ಚಕ್ಕುಲಿಮಾಮ
ಅಲ್ಲಿ ಯಾಕೆ ಕುಳಿತಿರುವೆ ಇಲ್ಲಿಗ್ ಬಾರೋ...
ಹಣ್ಣು ಕೊಡುವೆ... ಹಾಲು ಕೊಡುವೆ
ಓಡಿ ಬಾರೋ....
ಮಗುವಿನ ಬಾಯಲ್ಲಿ:
ತಂದಮಾಮ ... ಚನುಮಾಮ
ಇಲ್ಲಿ ಅಲ್ಲಿ  ಆಕೆ...
ಹಾಲ್... ಹಣ್ಣ ಮಮ್ಮ < ಮಮ್ಮ ಕೊಡುತ್ತಾಳೆ ಅಂಥಾ >
ಕೂಉಕಾ  ಬಾಲೋ....<ಕುಳಿತುಕೋ>
ಖಾಲಿ... ಇಲ್ಲ...< ಎಲ್ಲಾದರೂ ಚಂದಮಾಮ ಬಂದರೆ ಅಂಥಾ ಖಾಲಿ ಅಂತ ಹಾಡಿನ ತುದಿ>
ನನ್ನ ರಚನೆ:
ಮಮ್ಮ ಬಂದಳೇನೆ
ಪಪ್ಪಾ ಬಂದರೇನೆ ...
 ಇದು ನಾನು ಅವನು ಹಸುಗೂಸು ಇರುವಾಗ ಹೇಳುತ್ತಿದ್ದೆ.
ಅದು ಅವನ ಮನದಲ್ಲಿ ನೆಲೆಯೂರಿದ್ದು ಈ ರೀತಿ :
ಮಮ್ಮನೆನೆ ಪಪಾನೆನೆ ಪಾಪುವೇನೆ
ನೆನೆ ನೆನೆ
ಪಪ್ಪಲೇನೆ<ಚಪ್ಪಲ್>
ಬೌ ಬೌ ವೇನೆ
ತಾರ್ ಏನೇ<ಸ್ಟಾರ್>
ಅಜ್ಜ ಏನೇ.......
ಹೀಗೆ ಅವನ ನಿಘಂಟಿನ  ಬುಟ್ಟಿಯೊಳಗೆ ಸೇರಿರುವ ಪದಗಳೆಲ್ಲ ಸೇರುತ್ತಿವೆ.
  
                               ಮಗುವಿನ ಜೊತೆ ...ಮಗುವಾಗುವ    ಮನಸು      
                               ಚಂದ್ರಿಕಾ ಹೆಗಡೆ                    

13 ಫೆಬ್ರವರಿ 2011

ಕಾಲವೇ ಕೇಳು




ಕಾಲವೇ ,
ಅಂಬೆಗಾಲಿಡದ  ಕೂಸು
ಚೀರಾಡುತ್ತಿದೆ
ಕೇಳುವವರಿಲ್ಲ !
ಚೂರಾದ ಹೃದಯದಲ್ಲಿ
ಪ್ರೀತಿ ಸಿಂಚನಕ್ಕಾಗಿ
ಕಾದು ಕುಳಿತಿರುವವರಿಲ್ಲ.
ಸುಕ್ಕುಗಟ್ಟಿದ ಮುಖಕ್ಕೆ
ಮೊಡವೆ - ಗೊಡವೆ ಇಲ್ಲ:
ಇದ್ದರೂ ಮದ್ದು ಹುಡುಕುವವರಿಲ್ಲ.
ಆಗಸದ ಬಾಗಿಲಿನಲ್ಲಿ
ಕಾದು ಕುಳಿತಿಹ ನಕ್ಷತ್ರಗಳ
ಎಣಿಸುವವರಾರು?
ಕಾರ್ಗತ್ತಲಿನ- ಮನದ ಮೂಲೆಯಲ್ಲಿ
ವಿಷವು ಬಿಟ್ಟಿರುವದನ್ನು
ಕಾಣುವವರಾರು?
ಸೋತ ಮನದ ಸಾಲಿನಲ್ಲೂ
ಗೆಲುವ ಭಾವವ
ಗುರುತಿಸುವವರಿಲ್ಲ.
ಕಾದಾಡುವ ಜನಕ್ಕೆ
ಜಗಳ ಕಾಯುವ ತವಕ!
ಬಿಡಿಸುವವರಿಗೆ ಗತಿಯಿಲ್ಲ.
ಪುಗಸಟ್ಟೆ ಸಿಕ್ಕ ಜಾಗಕ್ಕೆ
ಮನೆ- ಮನ ಅರ್ಪಣೆ
ಈ ಜನಕ್ಕೆ ಕೊರತೆ? ಇಲ್ಲ.
ಸನ್ನಿ ಹಿಡಿದ ಬಾಣಂತಿಗೆ
ಉಪಚಾರ ಮದ್ದು- ಹೊರತು  
ಗಂಡೇ?    ಹೆಣ್ಣೇ?... ಮುಖ್ಯವಲ್ಲ.
ಕೂಡಿಟ್ಟ ಹಣವೆಲ್ಲಾ
ಉಪಯೋಗದ ಗತಿಯಲ್ಲಿ...
ಕಪ್ಪಾಗುವದು ಬೇಕಿಲ್ಲ.
ಕಾಲವೇ  ಕೇಳಿಲ್ಲಿ , ನಿಲ್ಲದಿರು
ನೀ ಕಾದಷ್ಟು , ಕುಳಿತಷ್ಟೂ,
ಹೇಳುವವರಿಲ್ಲ, ಕೇಳುವವರಿಲ್ಲ!
                          
                          ಚಂದ್ರಿಕಾ ಹೆಗಡೆ
                                                                  

10 ಫೆಬ್ರವರಿ 2011

ಮುಗಿದ ಕಾಯುವಿಕೆ




ಆಕೆ ಕಂಗೆಟ್ಟಿದ್ದಾಳೆ_
ಕಾಳ ರಾತ್ರಿಯ ಆಗಮನವಾದಂತೆಲ್ಲಾ 
ಕಣ್ ಕಟ್ಟಿವೆ...
ಕಣ್ಣ ಗೊಂಬೆ ಮಸುಕಾಗುತ್ತಲೇ 
ತಳಮಳದ ಒಡಲಾಗ್ನಿ 
ಕುದಿ ಕುದಿವ ಮನವಿರಲು 
ತಿಂದ ತಿನಿಸು , ಕಂಡ ಕನಸುಗಳೆಲ್ಲಾ 
ಕ್ಷಣಾರ್ಧದಲ್ಲೇ  ಭಗ್ನ !
ಕಪೋಲಗಲೆರಡರಲ್ಲಿ  ಕಣ್ಣೀರಿನ 
ಒರತೆ? ಕಾಣುವ ಲಕ್ಷಣವಿಲ್ಲ. 
ಬತ್ತಿದೆ- ಅದರ ಛಾಯೆ 
ಮಸುಕಾದ ಸೆರಗ ತುದಿ ಕೈಯಲ್ಲಿ 
ಛಾಯೆ ತೊಡೆಯುವ ಯತ್ನ!

ಮಡಿಲ ಕೂಸಿನ ಉಸಿರು, ಆಹಾರ 
ಸಿಗತೊಡಗಿದೆ ಯಾಂತ್ರಿಕ 
ಜೋಪಾನದಲ್ಲೂ ...
ನಲಿದಾಟ ನೆನಪಿನಲ್ಲಿ 
ಪ್ರೀತಿಯಿದೆ ಮನ-ಮಗುವಿನಲ್ಲಿ 
ಅನುರಾಗ ಸ್ಪಂದನಕೆ ಜಾಗವೆಲ್ಲಿ ಇನ್ನು? 
ಮಗು ಮಿಸುಕಾಟ ಭಾಗ್ಯ 
ನೆಮ್ಮದಿ ಇದರಲ್ಲಿ 
ಹುಡುಕಾಟ... ಇನಿಯನ ಆಸರೆ ಇನ್ನೆಲ್ಲಿ?
ಗುಂಡು ಸದ್ದಿನ ಮಾಯೆ 
ಹೋದ ಗಂಡನ ನೆನಪು 
ಗೋಳು ಕೇಳುವ ಜನಕೆ ಪುರುಸೋತ್ತೆಲ್ಲಿ?
ಕಡುಗಲಿಯ ನೆನಪು ಮಾತ್ರಾ ಆಕೆಯಲ್ಲಿ....

                                                    ಕಡುಗಲಿಗಳ ನೆನಪಿನಲ್ಲಿ ಇರುವ ಎಷ್ಟೋ ಸ್ತ್ರೀಯರಿಗೆ ಈ ಕವನ ಅರ್ಪಣೆ ..
                                                         ಚಂದ್ರಿಕಾ ಹೆಗಡೆ 

ಗಜ್ಜರಿ ಪಾಯಸ



 ನಾನು ಇದನ್ನು ಧಾರವಾಡದಲ್ಲಿ ಎಂ. ಎ  ಪಿಎಚ್.ಡಿ  ಮಾಡಲು ಹಾಸ್ಟೆಲ್ನಲ್ಲಿ ಇದ್ದಾಗ , ಅಲ್ಲಿ ಮೆಸ್ಸ್  ಆಂಟಿ ಹತ್ರಾ ಕಲಿತಿದ್ದು. ಮಾದೇವಿ ಆಂಟಿಗೆ ಥ್ಯಾಂಕ್ಸ್ .....


ಅಗತ್ಯಗಳು: 
ಗಜ್ಜರಿ   ೫< ೫ಜನರಿಗೆ >
ಹಾಲು  ಅರ್ಧಾ ಲೀಟರ್ 
ಸಕ್ಕರೆ ೫ ಚಮಚ 
ತುಪ್ಪ ೩ ಚಮಚ 
ಬೇಕಾದರೆ ಗೋಡಂಬಿ .. ಬಾದಾಮಿ ಚೂರುಗಳು 

ಮಾಡಲೇ ಬೇಕಾಗಿದ್ದು: 
ಮೊದಲು  ಗಜ್ಜರಿಯನ್ನು ತೊಳೆದು ಮೇಲಿನ ಪದರವನ್ನು ತೆಗೆದು... ಸ್ವಚ್ಚಮಾಡಿ. ಗಜ್ಜರಿಯನ್ನು ತುರಿದು  ತುಪ್ಪ ಹಾಕಿ  ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಸ್ವಲ್ಪ ಆರಿದಮೇಲೆ ಆ ಹುರಿದ ಗಜ್ಜರಿಯ ತುರಿಯನ್ನು ಮಿಕ್ಸಿಯಲ್ಲಿ ಒಂದು ಕ್ಷಣ  ತಿರುಗಿಸಿ. ೧ ಕ್ಷಣ ಇದು ನೆನಪಿರಲಿ. ಆಮೇಲೆ ಈ  ಪುಡಿಯಾದ ಗಜ್ಜರಿಯನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಲಿನೊಂದಿಗೆಸಕ್ಕರೆ ಹಾಕಿ  ೧೦ ನಿಮಿಷ  ಕುದಿಸಿ. ಗೋಡಂಬಿ  ಚೂರುಗಳನ್ನೂ ಕುದಿಯುವಾಗಲೇ ಹಾಕಿ. ಗೋಡಂಬಿಯನ್ನು ಹುರಿಯಬಾರದು. ಈ ಪಾಯಸ ಬಿಸಿಯಾಗಿರುವದಕಿಂಥ ಫ್ರಿಡ್ಜ್ ನಲ್ಲಿ ಇಟ್ಟು ತಂಪಾಗಿಸಿದರೆ ಇನ್ನು ರುಚಿಯೆನಿಸುವದು. ಇದಕ್ಕೆ ಬೇಕಾದರೆ ಖೋವಾ ಹಾಕಬಹುದು. 
ಬಣ್ಣ ಕೂಡಾ  ನೋಡಲು ಚೆಂದ. 


ಫೋಟೋ ನಾನು ಗೂಗಲ್ ನಿಂದ  ತೆಗೆದುಕೊಂಡಿದ್ದೇನೆ.  ಸಧ್ಯ ಈ ಪಾಯಸ ಮಾಡಿರದ ಕಾರಣ!

09 ಫೆಬ್ರವರಿ 2011

ಸಹಪಥಿಕನಲ್ಲಿ ...

 ಮಲ್ಲಿಗೆಯ ಮಾಲೆಯನು   ಹಿಡಿದು ನಿನ್ನಲ್ಲಿ ಬಂದೆ
ನೀನು ಕಾಯುವ ಹಾದಿ ನಾ ಬಲ್ಲೆನಲ್ಲ.  
ನಾ ಹಿಡಿದ ಮಲ್ಲಿಗೆಯು ನಿನ್ನಲ್ಲಿಯ ಸಂಪಿಗೆಯು 
ಏರುವವು ಊರ ಮುಂದಿನ ದೇವರಿಗೆಯೇ! 


ನಾ ಹೇಳುವ ಮಾತು ನಿನ್ನಲ್ಲಿಯೂ ಇದೆ 
ಸಿರಿತನಕ್ಕೂ ಮಿಗಿಲಾಗಿದೆ ನಿನ್ನಲ್ಲಿಯ ಸ್ನೇಹ .
ಮನ ಹಗುರಾಗಲು ,ತನುವಿಗೆ ಹಿತವೆನಿಸಲು 
ನಿನ್ನದೊಂದು ಸ್ಪರ್ಶ ಸಾಕೆನಲೇ?


ಅಂದು ಹಿಂದಿನ ಮಾತು ಸಂದರ್ಭಕ್ಕನುಸಾರಿ 
ಪುನಃ  ಏಳುವ ಭಾವ ಪ್ರೀತಿಯೊಂದೇ.
ನೀನು ಸಂಯಮಿ, ನಾನು ಸ್ನೇಹಾಕಾಂಕ್ಷಿ
ನಮ್ಮಿಬ್ಬರ ಮನವೀಗ ಹಾಯಾಗಲು.


ಬಂದ ಭಾವಕ್ಕೊಂದು ರೂಪುಕೊಡಲೆಮಗೆ 
ಸಂಪ್ರೀತವೆನಿಸಿದೆ  ಜೀವಕ್ಕೆಲ್ಲ .
ದೊರೆತ ಹಿರಿಯರ ಹಾರೈಕೆ, ಜತೆಯಿರಲು ನಮಗೇಕೆ 
ಜೋಕೆ ಎನ್ನುವ ಮಾತು ಇನ್ನು ಬೇಕೇ.? ......
                                                             ಪ್ರೀತಿಯ ಸಿರಿತನದ ಸವಿಯಲ್ಲಿ....
                                                             ಚಂದ್ರಿಕಾ ಹೆಗಡೆ .

07 ಫೆಬ್ರವರಿ 2011

ನಿನಗೊಂದಿಷ್ಟು ಪಾಲಿದೆ





ಭವದ ಬಾಳ ನಾಳೆಗಾಗಿ
ನಿನ್ನೆದೊಂದಿಷ್ಟು ಕನಸಿದೆ
ಇಟ್ಟ ಬಿಟ್ಟ ನೋವನಿಲ್ಲಿ
ಮರೆಯುವಂಥ ಮನಸಿದೆ.

ಬಾಳ ಬುತ್ತಿ ಹಿಡಿದು ಹೊರಟ
ಭಾವುಕನ ನೆನಹಿದೆ
ಸೋತ ಮನದ ಸಂದ ಫಲದ
ಸ್ವರೂಪಗಳ ಬಯಲಿದೆ .

ಚಿಪ್ಪಿನಲ್ಲಿ ಬಿದ್ದ ಹನಿಯ
ಮುತ್ತಾಗಿ ಪಡೆದ ನೆಲೆಯಿದೆ
ಬಿದ್ದ ಮಳೆಯ ತಂಪನೆಲ್ಲಾ
ಒಂದಾಗಿಸುವ ಹುರುಪಿದೆ .

ಕಾದುಕೊಂಡ -ಕಾವುಗೊಂಡ
ಕಾತರಗಳ ಸಾಲಿದೆ
ಸೇರಿಕೊಂಡ, ಸೋರಿ ಹೋದ
ಭಾವ - ಭಾವನೆಗಳಾ ಜೊತೆಯಿದೆ .

ಕಾಣದಿರುವ ಹೃದಯದಲ್ಲಿ 
ಪ್ರೀತಿ - ನೋವು ಅಡಗಿದೆ 
ಕಂಡು ಬಂದ ಸುಖದಲೆಲ್ಲಾ 
ನಿನಗೊಂದಿಷ್ಟು ಪಾಲಿದೆ. 

ಮನದ ಭಾವ ಅಡಗಿದಲ್ಲೇ
 ತಂಪಾದ  ಚಂದ್ರಿಕೆ ಹರಿದಿದೆ 
ಸೋತು ಗೆಲುವು ಕಂಡ ಮೇಲೆ 
ಇನ್ನೇನು ಕಾದಿದೆ? 

ಬಾಳ ಬಯಲ ದಾರಿಯಲ್ಲಿ 
ಭವದ ನಾಳೆ ಬರುತಿದೆ 
ನಿನ್ನೆ ಇದ್ದ ನೋವು ಎಲ್ಲಾ 
ಸುಖದೆಡೆಗೆ ತಿರುಗುತಿದೆ! 


05 ಫೆಬ್ರವರಿ 2011

ಸಹಪಥಿಕನಿಗೆ



ಒಳಗುದಿಯಲ್ಲಿ ಬಹುಬೇಗ ಬಂದೆ
ನಿನ್ನರಿವು ನಾನರಿಯೆ  ನೀ ಬಲ್ಲೆ ಎಲ್ಲ
ಬಾಳ ಬೆಸುಗೆಯ ಸನಿಹ ಭಾವುಕತನವೆಲ್ಲ
ಜೀವನ ಜ್ಯೋತಿಯಾಗಿದೆ , ಕುದಿ ಮರೆತೆವಲ್ಲ!

ನಿನ್ನ ಆಲಿಂಗನ , ನಿನ್ನ ಸಾಹಚರ್ಯದಿಂದ ನಾ
ಬಹುಬೇಗ ಕಾವಾರಿಸಿ ನಿಂದಿರುವೆನಲ್ಲ
ಇದಿರಾಟ, ಹೋರಾಟ, ಸಿಟ್ಟೆಲ್ಲ ಬದಿಗಿರಿಸು
ನೀ ಹೇಳಿದ ಮಾತು ನಾನರಿತೆನಲ್ಲ!

ಪ್ರೀತಿ ಸಂಗಮ ನೀ ವಾತ್ಸಲ್ಯ ಪೂರಕ
ಮನದೊಳಗೆ ಸ್ನೇಹಮಯಿ ಓ ಜೊತೆಗಾರನೆ...
ಬಾಳ ನೌಕೆಯಲಿ ಪಥಿಕರಾಗಿಹ ನಾವೀಗ
ಸಂಪ್ರೀತವಾಗಿಹೆವು ಬಾಳಲೆಲ್ಲ.

ಉದಯವಾಗಿತ್ತು ಪ್ರೀತಿ ಬೆಳದಿಂಗಳಿರುಳಿನಲಿ
ಕಿರುದಾರಿ ಹಿರಿದಾಯ್ತು ಹಿರಿಯರೆದುರಿನಲಿ
ಒಲವು ಮೆಚ್ಚಿದ ರೀತಿ, ನಿರಾಳವಾಯ್ತು ಭೀತಿ
ಸಫಲವಾಗಲಿ ನಮ್ಮ ಜೀವನ ನೀತಿ-ಪ್ರೀತಿ .

ಬೆಳೆಯೋಣ ಸಿರಿಯನ್ನು , ಮಮತೆಯ ಹಿತದಲ್ಲಿ
ಸುರಿಯೋಣ ಸ್ನೇಹಮಯಿ ಮಾತುಗಳನೆಲ್ಲ
ಬರುವ ನಾಳೆಯ ಜೊತೆಗೆ ನಿನ್ನೆಯ ಅನುಭವದ
ಸಾರವನು ಬಳಸೋಣ ಇಂದಿಗೆಲ್ಲ.

ಕಷ್ಟ- ಕಾರ್ಪಣ್ಯಗಳು ಬಹುಸಹಜ ಜೀವನದಿ
'ನಾ ಇರುವೆ ನಿನ್ನಲ್ಲಿ' ಭಯವಿನ್ನು ಏಕೆ?
ಜೊತೆಯಲ್ಲಿ ನಡೆಯುವೆ , ಸದಾಶಯ ಗತಿಯಲ್ಲಿ
ಹಿತ ಕಾಯುವ ಆತ್ಮವಿಶ್ವಾಸ ಇದೆಯಲ್ಲ ಇಲ್ಲಿ.

ಬಂದೇ ಬರುವವು ಕಾಲ ಕಷ್ಟ ಮರೆಸುವದಕ್ಕೆ
ತಾಳಬೇಕು ನಾದಕ್ಕೆ-ಜೀವನದ ವೇಗಕ್ಕೆ
ಸಾಂಗತ್ಯ ಹಿತವಿದೆ, ಸಂತೋಷ ಸನಿಹವಿದೆ
ಕನಸು ವಾಸ್ತವ ಘಳಿಗೆ , ಕಾದು ಕುಳಿತಿವೆ ನಾಳೆಗಳಿಗೆ !
                                                 
                                                     ಹೆಜ್ಜೆಯಲ್ಲಿ ಹೆಜ್ಜೆಯಿಡುವ ....!
                                                        ಚಂದ್ರಿಕಾ ಹೆಗಡೆ

03 ಫೆಬ್ರವರಿ 2011

ಸ್ವಾತಂತ್ರ್ಯ




ತಲುಪಲೇ ಬೇಕು ತಿಳಿದಲ್ಲಿಗೆ
ಬೇಕಾದ ಅಗಲಳತೆಗಳಲ್ಲಿ ಹೋಗುವ
ಮನ ಹುಮ್ಮಸ್ಸನ್ನು ಕೈಯಲ್ಲಿ ಹಿಡಿದು ,
ಕ್ಷಣ , ಕೊಂಚ ತಪ್ಪಿದರೂ
ನೋವು- ಸಾವು ಕಟ್ಟಿಟ್ಟ ಬುತ್ತಿ
ದಾರಿ- ಗೆರೆ ಎಳೆದಿದೆಯಲ್ಲ !
ಮಾರ್ಗದರ್ಶಿ ಯಾಕೆ ? ಹೌದಲ್ಲ.
ಕಗ್ಗತ್ತಲಿನ ದುರ್ಗಮ ದಾರಿ
ಮುಗಿದಿದೆ. ಚಿಂತೆ ಬಿಡು .
ಬೆಳಕಿನ ಸ್ವಚ್ಛಂದತೆ ಸಿಗಲಿದೆ
ಕ್ಷಣಾರ್ಧದಲ್ಲಿಯೇ
ಮನದ ಬೇಗುದಿಯ ಬಿಸುಡಿಬಿಡು
ಸ್ನಿಗ್ಧತೆ, ಸ್ವತಂತ್ರತೆ ಹೊರಗಿದೆಯಲ್ಲ
ನಡೆಯುತ್ತೀಯಾ ? ಓಡುತ್ತಿರುವೆಯಾ !
ಬೆಳಕಿನ ಸನಿಹ ಜಾರುತ್ತಿರುವೆ-
ತಿಳಿದಿದೆ ನನಗೆ
ನೀನು ಬಂದ, ನಿನಗೆ ಸಂದ
ಕಷ್ಟ ಕೋಟಲೆಗಳ ಪರಿ
ನೆನಪಾಗದಿರಲಿ ಮತ್ತೊಮ್ಮೆ
ಹಳೆಯ ಬೇಗೆ - ಉಸಿರುಗಟ್ಟಿಸುವಿಕೆ
ದಾಟಿ ಬಿಡು ಕತ್ತಲೆಯ ಮನಸ್ಥಿತಿಯ
ಸ್ವಚ್ಚ ನಿಸರ್ಗಧಾರೆಯಲ್ಲಿ
ಒಂದಾಗಿ ಬಿಡು
ಸರ್ವ ತಂತ್ರ ಸ್ವತಂತ್ರವಾಗಿ ...

ಸ್ವತಂತ್ರತೆಯ ಸದಾ ಅನುಭವದಲ್ಲಿ...
    ಚಂದ್ರಿಕಾ ಹೆಗಡೆ .