18 ಡಿಸೆಂಬರ್ 2012


ಮಲೆಗಳಲ್ಲಿ ಮದುಮಗಳು- ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ


ಭಾಗ-೫



ದಿನನಿತ್ಯದ  ಕೆಲಸದ ವಿಷಯಕ್ಕೆ ಬಂದರೆ, ' ಶ್ರಮ ವಿಭಜನೆಯ " ತತ್ವ ಅಡಕವಾಗಿರುವ  ಬಗೆ ಕಾಣಬಹುದು . ಸ್ತ್ರೀಯರಿಗೆ  ನೀಡುವ ಕೆಲಸವೇ ಬೇರೆ  ಗಂಡಾಳುಗಳಿಗೇ  ಪ್ರತ್ಯೇಕ ಕೆಲಸ. ಪುಟ ೧೧೨ ದಲ್ಲಿ " ಕೋಣೂರಿನ  ಅಡಕೆ ತೋಟದ ಒಂದು ಮೂಲೆಯಲ್ಲಿ ರಂಗಪ್ಪ ಗೌಡರ ಗಟ್ಟದಾಳುಗಳು  - ಚಿಂಕ್ರ , ಪಿಜಿಣ , ಐತ , ಮೊಡಂಕಿಲ - ಹಿಂದಿನ ದಿನದ ಬಿರುಗಾಳಿ ಮಳೆಯಲ್ಲಿ ಉರುಳಿ ಅಡಕೆಯ ಮರಗಳ ಮೇಲೆ ಬಿದ್ದಿದ್ದ ಒಂದು ದೊಡ್ಡ ಅತ್ತಿಯ ಮರವನ್ನು ಸವರಿ ಕಡಿಯುವ  ಕೆಲಸದಲ್ಲಿ ತೊಡಗಿದ್ದರು . ಅವರ ಹೆಣ್ಣಾಳುಗಳು - ದೇಯಿ , ಅಕ್ಕಣಿ , ಪೀಂಚಲು , ಬಾಗಿ - ತಮ್ಮ ಗಂಡಸರಿಗೆ ನೆರವಾಗಿ , ಸವರಿದ ಸೊಪ್ಪನ್ನು ಅಡಕೆಯ  ಮರಗಳ ಬುಡದ ಮೇಲುಸೊಪ್ಪಿನ  ಜಿಗ್ಗು ಮುಚ್ಚುವಂತೆ ಹೊತ್ತು ಹಾಕುತ್ತಿದ್ದರು " ಎಂಬ ಮಾತಿನಲ್ಲಿ  ಮೇಲಿನ ಕೆಲಸ ವಿಭಜನೆಯ  ಪರಿಕ್ರಮವನ್ನು ದರ್ಶಿಸಬಹುದು .
                                                                                 ಆಧುನಿಕತೆಯ ಪ್ರಭಾವದಿಂದ ದೂರವಿದ್ದು ಬಾಳಿದ ಜನರು ದುಡಿಮೆಯಲ್ಲಿಯೇ ತತ್ಪರರಾಗಿದ್ದು , ವಿದ್ಯಾಭ್ಯಾಸದ ಕುರಿತಾಗಿ ಸಾಂಪ್ರದಾಯಿಕ ಭಾವನೆಗಳು ಮನೆಮಾಡಿಕೊಂಡಿದ್ದವು .ಅದರಲ್ಲಿಯೂ  ಸ್ತ್ರೀ  ವಿದ್ಯಾಭ್ಯಾಸವಂತು " ಗಂಡುಮಕ್ಕಳಿಗೇ  ಅಪೂರ್ವವೂ , ಅಸಾಧ್ಯವೂ ಅತಿ ವಿರಳವೂ  ಆಗಿದ್ದ ಓದು ಬರಹವನ್ನು ಸ್ತ್ರೀಯರಿಗೆ ಕಲಿಸಲು ಯಾರೂ  ಒಪ್ಪುತ್ತಿರಲಿಲ್ಲ . ಹೆಂಗಸರು  ಓದು ಕಲಿಯುವದು ಗಂಡಸರು ಸೀರೆಯುಡುವದಕಿಂತಲೂ  ಹಾಸ್ಯಾಸ್ಪದವಾಗಿತ್ತು " ಎನ್ನುವ ಮಾತು ಪುಟ ೮೧ ರಲ್ಲಿ ಕಾಣ ಸಿಗುತ್ತದೆ .

ಕೊನೆಯಲ್ಲಿ ,
 ಕಾದಂಬರಿಯ ಭಾಷೆಯನ್ನು  ಗಮನಿಸಿದಾಗ , ಹಲವಾರು ಜಾತಿ, ವರ್ಗಗಳ ಜನರ ಆಡು ಮಾತು  ಬಳಕೆಯಾಗಿದೆ. ಕಾದಂಬರಿಯ ನಿರೂಪಣೆಯಲ್ಲಿ   ಕೃತಿಕಾರ ತನ್ನ ಭಾಷೆಯನ್ನು ಬಳಸಿಕೊಂಡರೂ , ಸಂಭಾಷಣೆ  ಆಯ ವರ್ಗಗಳ ಭಾಷೆಯಲ್ಲೇ ಇದೆ! ಪಡೆನುಡಿ , ಗಾದೆಮಾತು , ಕಾವ್ಯಾತ್ಮಕ ದೀರ್ಘ ವಾಕ್ಯ ಕಾದಂಬರಿಗೆ ಮೆರುಗು ನೀಡಿವೆ. 

ಗ್ರಾಮೀಣ ಮಾತಿನ ಧಾಟಿ ಅಭಿವ್ಯಕ್ತಿಗೆ ಅವರದೇ ಆದ ಭಾಷೆಯ ಬಳಕೆಗೆ ಒಂದು ಉದಾಹರಣೆ : ಪುಟ ೫೩ ರಲ್ಲಿ ಹೂವಲ್ಲಿ ವೆಂಕಟಣ್ಣನಿಗೂ  , ಹಳೆಮನೆ ಸುಬ್ಬಣ್ಣ ಹೆಗ್ಗಡೆಗೂ  ಹಂದಿಯ ವ್ಯವಹಾರದಲ್ಲಿ ನಡೆವ ಮಾತು- ಕತೆ 

" ನೀ  ಒಳ್ಳೆ ಗಿರಾಸ್ತ ಕಣೋ ! ಅಲ್ಲಾ ನಿನ್ನೆ ಬತ್ತೀನಿ  ಅಂದಾವ "

" ನಾ ಏನ್ ಮಾಡದ್ರಾ ? ಹ್ಯಾಂಗಾರೆ , ಆ ಸನಿ  ಮಕ್ಳು ಬತ್ತೀನಿ ಅಂದೋರು ಬರ್ಲೆ  ಇಲ್ಲಾ . ಕಾದೆ ಕಾದೆ ..... ಹೊತ್ತಾಗಿ ಹೋತು . ಇನ್ನೇನ್ ಮಾಡಾದು ..... ನಾಳೆ  ಬೆಳಿಗೆ  ಹೋಗಾನ  ಅಂತಾ ಹೇಳಿ ನಿಂತಬಿಟ್ಟೆ "

" ಯಾರಿಗೆ  ಹೇಳಿದ್ಯೋ ?"

" ನಿಮ್ಮ ಹೊಲೇರಿಗೇ  ಹೇಳಿದ್ದೆ "
" ನೀ ಒಳ್ಳೆ  ಗಿರಾಸ್ತ . ಅವರು ತ್ವಾಟದ ಬೇಲಿ ಮಾಡಾದ್ ಬಿಟ್ಕಂಡು ನಿನ್ನ ಹಂದಿ ಹೊರಾಕೆ ಬತ್ತಾರೆ ? ನೀ ಬೇಕಾದ್ರೆ ಒಳ್ಳೆ ಗಿರಾಸ್ತ !"

" ಹಾಂಗ್ಯಾರೆ  ಏನ್ ಮಾಡ್ಲಿ ಹೇಳಿ .... ನಿನ್  ನಾನ್ ಹೊತ್ಕಂಡ್ ಹೊ'ಬೇಕು ಅದಕ್ಕೂ ಸೈ  ಅಂತಿದ್ದೆ ಕಾಲುಂದ್  ಹಿಂಗಾತಲ್ಲ ಹೇಳಿ "
" ಏ ' ನಾತೋ ?"

" ಹಾಂಗ್ಯಾರೆ , ಆವತ್ತು ಮರಸಿಗೆ ಕೂತಿದ್ದೆ. ಹೋದ ತಿಂಗಳು ಬೆಳಕಿನಾಗೆ  ಒಂದು ಮೊಲ ಬಂತು . ಹೊಡೆದೆ , ಇಳಿದು ಹೇರಕಿಕೊಳ್ಲಾಕ್ ಹೊಗಾಕೂ ತೆವಳಿಕೂತ  ತೆವಳಿಕೂತ ಹೋಗಾಕೆ  ಸುರು ಮಾಡ್ತು , ಏಟು ಓಡಾಡ್ಸಿದ್ರೂ  ಸಿಕ್  ಒಲ್ ದು . ಬಯ್ ಲು   ತುಂಬಾ ಒಡ್ಯಾಡ್ಸಿ ಸಾಕಾಗಿ ಹೊ'ತು  ಅಂತೀನಿ . ಹ್ಯಾಂಗಾರೆ ಹಾಳು  ಮುಂಡೆದಕ್ಕೆ  ದೊಣ್ಣೆ ೕ ನೇ  ಸೈ  ಅಂತಾ ಒಂದು ಬಡಿಕೆ ತಗೊಂಡು ಜಪ್ಪದೆ . ಅದರ ಕೊರ್ಲು ಹೊಡ್ದುಬಿಡ್ತು  ನೋಡಿ . ಹ್ಯಾಂಗಂತ , ಹೆಚ್ಚಿನ ನೆತ್ರೂ ಬರ್ಲೂ  ಇಲ್ಲ..... ಅದೇ ಗಾಯ ದೊಡ್ದಾಯ್ತು , ಕಡೀಗೆ ಕುಂಟನ ಹುಣ್ಣಿಗೆ ತಿರಗ್ತೂ ..."ಭಾವಾವೇಗ , ಭಾವ ತೀವ್ರತೆ ಅದ್ಭುತ ....

                           ಪ್ರಸ್ತುತ ಸಂದರ್ಭಕ್ಕೆ ಇದನ್ನು ಅನ್ವಯಿಸಿ ನೋಡಿದಾಗ ಅನೇಕ ವೈರುಧ್ಯಗಳು ಕಂಡುಬರುತ್ತಿವೆ . ಕುವೆಂಪು ಅಂದು ಚಿತ್ರಿಸಿದ ಅಭೇದ್ಯ ಅರಣ್ಯ ಇಂದು ಉಳಿದಿಲ್ಲ . ಅಂದಿನ ಅನೇಕ ಕವಿ/ ಸಾಹಿತಿಗಳಿಗೆ " inspiration " ಆಗಿರುತ್ತಿದ್ದ ವನಸಿರಿ ಆಧುನಿಕತೆಯ ಭಯಂಕರತೆಗೆ  ಸಿಕ್ಕು ತನ್ನ ಹಸಿರಿನ ಉಸಿರನ್ನು ಕಳೆದುಕೊಳ್ಳುತ್ತಿದೆ. 

" ಹಸುರೆತ್ತಲ್ , ಹಸುರಿತ್ತಲ್ "- ಹಸುರು ಎತ್ತಲೂ ಇಲ್ಲದಾಗುತ್ತಿರುವದು ಶೋಚನೀಯ .


...........................................ಮುಕ್ತಾಯ ................................



ಚಂದ್ರಿಕಾ ಹೆಗಡೆ 

2 ಕಾಮೆಂಟ್‌ಗಳು: