15 ಸೆಪ್ಟೆಂಬರ್ 2012

ಸಾಮಾನ್ಯ ಜನರ ಚಿಂತನೆಗೆ ತೆರೆದುಕೊಳ್ಳದ ಹಲವು  ವಿಚಾರಗಳು ಸನದಿಯವರ ಕಾವ್ಯದ ಸಾಲುಗಳಾಗಿವೆ ಎನ್ನುವದರಲ್ಲಿ ಸಂಶಯವಿಲ್ಲ. ಅವರ  " ಅಮೆರಿಕೆಯ ಬರಿ ಮೈಗಳು " ಕವಿತೆಯಿಡೀ ಅಮೆರಿಕೆ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಅಷ್ಟೇ ಅಲ್ಲ, ಕವಿತೆಯ ಕೊನೆಯ ಸಾಲುಗಳು ಕವಿತೆಯಲ್ಲಿ ಅಡಗಿರುವ  ಜಾಗತಿಕ ಜ್ಞಾನ _ ಸಂಸ್ಕೃತಿಯ ಗಮನಿಸುವಿಕೆಗೆ ಸಾಕ್ಷಿಯಾಗುತ್ತವೆ.
                                                           " ಇಲ್ಲಿಯ ಬರಿ ಮೈ ಚೆಲುವನ್ನು ಕಂಡು 
                                                              ಸುರಿಸುವದಿಲ್ಲ ಯಾರೂ ಜೊಲ್ಲು
                                                              ಮಾಡುವದಿಲ್ಲ ಯಾರಿಗೆ ಯಾರು ಗುಲ್ಲು!"
ಎಂಬ ಲೋಕ ಚಿಂತನೆ ಅಥವಾ ಅಲ್ಲಿಯ  ಸಾಮಾನ್ಯ ಜೀವನ ಪದ್ಧತಿಯು ಅನ್ಯ ದೇಶಿಗರಿಗೆ ಅಸಭ್ಯವಾಗಿ ಕಂಡರೆ ಅಲ್ಲಿಯವರಿಗೆ ಅದು ಹೊಸತೇನಲ್ಲ ಎಂಬ ವಿಚಾರವನ್ನು ಕವಿತೆ ಧ್ವನಿಸುತ್ತದೆ.
     
                               ಸನದಿಯವರ ಶಬ್ದ ಸಂಸಾರದ ಒಂದು ಕವಿತೆ " ಅಮೆರಿಕೆಯಲ್ಲಿ ಕಂಡ ಕನಸು " ಈ ಕವಿತೆ ಬೇಂದ್ರೆಯವರ " ಕಣಸಿನೊಳಗೊಂದು ಕಣಸು" ಹಾಗು ಕುವೆಂಪು ಅವರ " ಕಲ್ಕಿ" ಕವಿತೆಯನ್ನು ಮತ್ತೆ ಮತ್ತೆ ಅನುರಣನಗೊಳಿಸುವಂತಿದೆ. ಸುತ್ತಣ ಜಗತ್ತಿನ  ಆಗು ಹೋಗುಗಳಿಗೆ ಸ್ಪಂದಿಸುವ ಹೃದಯವಂತ ಕವಿ ಮನಸ್ಸು ಇಲ್ಲೆಲ್ಲಾ ' ವಿಶ್ವ ಮಾನವ ಹೃದಯ"ಕ್ಕೆ ತೆರೆದುಕೊಳ್ಳುತ್ತಿದೆ.
ಪ್ರಕೃತಿಯಾರಾಧಕರಾಗಿ ಕವಿತೆಯಲ್ಲಿ  ಕಾಣಸಿಗುವ ಸನದಿಯವರು ಮುಂಬೈನಲ್ಲಿ ಎಷ್ಟೋ  ವರುಷ ಕಡಲ ತಡಿಯ ಸಾಹಚರ್ಯದಲ್ಲಿ ಇದ್ದವರು. " ದುಬೈನಲ್ಲೊಂದು ಸಂಜೆ" ಯಲ್ಲಿ ಮಳಲತಡಿಯಲ್ಲಿ ಮಲಗಿದ ಕವಿ  ಸುತ್ತಣ ವಾತಾವರಣವನ್ನು ಅನುಭವಿಸುತ್ತ ಆಗಸದ  ಚಿತ್ರಮಾಲೆಯನ್ನು ಗಮನಿಸುತ್ತ ಏಳಲು ಮನಸ್ಸಾಗುತ್ತಿಲ್ಲ ಎನ್ನುವರು. 
"ಆಗಸದ ಆಲ್ಬಮ್ ನೋಡುತ್ತ " ಇಲ್ಲೇ ಇರಲೇ ಎಂದು ಪ್ರಶ್ನಿಸುವದರಲ್ಲೇ  ನಿಸರ್ಗಾರಾಧಕರಾಗಿ ಕಾಣಸಿಗುತ್ತಾರೆ.  " ಅರಬ ಸೀಮೆಯ ಹಾಡು" ಅರಬ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಬೇರೆ ಬೇರೆ ರಾಷ್ಟ್ರಗಳ ದುಡಿಯುವ ಮನಸ್ಸುಗಳ ನೋವು_ವಿರಹ_ ಅನಿವಾರ್ಯತೆಗಳ ಧ್ವನಿ ಇಲ್ಲಿ ಕೇಳಿಸುತ್ತಿದೆ. ಹೊರಗಿನ ರಾಷ್ಟ್ರಗಳ " ಕಾಯಕ_ ಕೈಲಾಸ "ಎನ್ನುವ  ದುಡಿವ ವರ್ಗಗಳ  ಮನದಾಳದ ನೋವು " ನುಂಗಿ " ಸಹಿಸಿಕೊಳ್ಳುವ ಅನಿವಾರ್ಯತೆಯ  ದಾರುಣ ದಾಖಲೆಯೆನಿಸುತ್ತಿದೆ.
" ಹೊಟ್ಟೆ ತುಂಬಿದ್ದರೂ ಹೃದಯದುಪವಾಸಿಗಳು!" ಎನ್ನುವಲ್ಲಿ ತನ್ನವರನ್ನು _ತಮ್ಮ ನೆಲವನ್ನು ಬಿಟ್ಟು ಬಂದು ಎಷ್ಟೋ ದೂರದಲ್ಲಿ ಇರುವ ತಮ್ಮವರಿಗಾಗಿ ಹಂಬಲಿಸುತ್ತ , ದುಡಿಯುತ್ತ ದಿನ ದೂಡುತ್ತಿರುವ       ದುಡಿವ ವರ್ಗದವರ " ಕಳೆದುಕೊಳ್ಳುತ್ತ- ಪಡೆಯುವಿಕೆ"ಯತ್ತ ಕವಿ ದೃಷ್ಟಿಹಾಯಿಸುತ್ತಾರೆ.

ಸಮಾಜಮುಖಿಯಾದ  ಕವಿ ಹೊಸ ಶಬ್ದ ಸಂಸಾರದ ಯಶಸ್ವೀ ನಾವಿಕನಾಗಿ ಇಡಿ ಸಂಕಲದ ಓದುವಿಕೆಯಲ್ಲೆಲ್ಲಾ ಕಾಣಿಸಿಕೊಳ್ಳುತ್ತಾರೆಂದರೆ  ಕವಿ ಕವಿತೆಯಲ್ಲಿ ಅದೆಷ್ಟು ತಾದಾತ್ಮ್ಯದಿಂದ ಭಾವಗಳನ್ನು ಸಾಲುಗಳನ್ನಾಗಿ ಹೆಣೆದಿದ್ದಾರೆ ಎಂಬುದು ವೇದ್ಯವಾಗುತ್ತದೆ.


ಚಿಕ್ಕ  ಪ್ರಯತ್ನ ..... ಒಂದು ಮೇರು ಕವಿಯ ಅನನ್ಯ ಸಾಲುಗಳಿಗೆ.


ನಮಸ್ಕಾರ.... ಹಾರೈಕೆ ಇರಲಿ ಸದಾ.....


ಚಂದ್ರಿಕಾ ಹೆಗಡೆ