05 ಫೆಬ್ರವರಿ 2011

ಸಹಪಥಿಕನಿಗೆ



ಒಳಗುದಿಯಲ್ಲಿ ಬಹುಬೇಗ ಬಂದೆ
ನಿನ್ನರಿವು ನಾನರಿಯೆ  ನೀ ಬಲ್ಲೆ ಎಲ್ಲ
ಬಾಳ ಬೆಸುಗೆಯ ಸನಿಹ ಭಾವುಕತನವೆಲ್ಲ
ಜೀವನ ಜ್ಯೋತಿಯಾಗಿದೆ , ಕುದಿ ಮರೆತೆವಲ್ಲ!

ನಿನ್ನ ಆಲಿಂಗನ , ನಿನ್ನ ಸಾಹಚರ್ಯದಿಂದ ನಾ
ಬಹುಬೇಗ ಕಾವಾರಿಸಿ ನಿಂದಿರುವೆನಲ್ಲ
ಇದಿರಾಟ, ಹೋರಾಟ, ಸಿಟ್ಟೆಲ್ಲ ಬದಿಗಿರಿಸು
ನೀ ಹೇಳಿದ ಮಾತು ನಾನರಿತೆನಲ್ಲ!

ಪ್ರೀತಿ ಸಂಗಮ ನೀ ವಾತ್ಸಲ್ಯ ಪೂರಕ
ಮನದೊಳಗೆ ಸ್ನೇಹಮಯಿ ಓ ಜೊತೆಗಾರನೆ...
ಬಾಳ ನೌಕೆಯಲಿ ಪಥಿಕರಾಗಿಹ ನಾವೀಗ
ಸಂಪ್ರೀತವಾಗಿಹೆವು ಬಾಳಲೆಲ್ಲ.

ಉದಯವಾಗಿತ್ತು ಪ್ರೀತಿ ಬೆಳದಿಂಗಳಿರುಳಿನಲಿ
ಕಿರುದಾರಿ ಹಿರಿದಾಯ್ತು ಹಿರಿಯರೆದುರಿನಲಿ
ಒಲವು ಮೆಚ್ಚಿದ ರೀತಿ, ನಿರಾಳವಾಯ್ತು ಭೀತಿ
ಸಫಲವಾಗಲಿ ನಮ್ಮ ಜೀವನ ನೀತಿ-ಪ್ರೀತಿ .

ಬೆಳೆಯೋಣ ಸಿರಿಯನ್ನು , ಮಮತೆಯ ಹಿತದಲ್ಲಿ
ಸುರಿಯೋಣ ಸ್ನೇಹಮಯಿ ಮಾತುಗಳನೆಲ್ಲ
ಬರುವ ನಾಳೆಯ ಜೊತೆಗೆ ನಿನ್ನೆಯ ಅನುಭವದ
ಸಾರವನು ಬಳಸೋಣ ಇಂದಿಗೆಲ್ಲ.

ಕಷ್ಟ- ಕಾರ್ಪಣ್ಯಗಳು ಬಹುಸಹಜ ಜೀವನದಿ
'ನಾ ಇರುವೆ ನಿನ್ನಲ್ಲಿ' ಭಯವಿನ್ನು ಏಕೆ?
ಜೊತೆಯಲ್ಲಿ ನಡೆಯುವೆ , ಸದಾಶಯ ಗತಿಯಲ್ಲಿ
ಹಿತ ಕಾಯುವ ಆತ್ಮವಿಶ್ವಾಸ ಇದೆಯಲ್ಲ ಇಲ್ಲಿ.

ಬಂದೇ ಬರುವವು ಕಾಲ ಕಷ್ಟ ಮರೆಸುವದಕ್ಕೆ
ತಾಳಬೇಕು ನಾದಕ್ಕೆ-ಜೀವನದ ವೇಗಕ್ಕೆ
ಸಾಂಗತ್ಯ ಹಿತವಿದೆ, ಸಂತೋಷ ಸನಿಹವಿದೆ
ಕನಸು ವಾಸ್ತವ ಘಳಿಗೆ , ಕಾದು ಕುಳಿತಿವೆ ನಾಳೆಗಳಿಗೆ !
                                                 
                                                     ಹೆಜ್ಜೆಯಲ್ಲಿ ಹೆಜ್ಜೆಯಿಡುವ ....!
                                                        ಚಂದ್ರಿಕಾ ಹೆಗಡೆ

7 ಕಾಮೆಂಟ್‌ಗಳು:

  1. ಅಕ್ಕ.. ನಿಮ್ಮ ಹಾಗೂ ನಿಮ್ಮ ಸಹ ಪಥಿಕನ ಜೀವನ.. ಹೀಗೆ. ಸಾಮರಸ್ಯದಿಂದ ಕೂಡಿರಲಿ ನಿಜಕ್ಕೂ.. ಸುಂದರ ಕವನ..

    ಪ್ರತ್ಯುತ್ತರಅಳಿಸಿ