12 ಏಪ್ರಿಲ್ 2011

ಕಳೆದ ಬೇಸಿಗೆ ರಜಾ.....



ಅಮೋಘವಾದ ಬಾಲ್ಯವನ್ನು ಅತ್ಯದ್ಭುತವಾಗಿ ಕಳೆದಿದ್ದೇವೆ.
ಮಳೆಗಾಲದಲ್ಲಿ ಆರಂಭಗೊಂಡ ಶಾಲಾ ಕ್ರಿಯೆ- ಕರ್ಮ ಮಾರ್ಚ್ ವೇಳೆ ಮುಗಿಯುವ ಹಂತ. ಮಧ್ಯದಲ್ಲಿ ಅಕ್ಟೋಬರ್  ರಜಾ... ಇದರಲ್ಲಿ ....ತೋಟದಲ್ಲಿ ಇದ್ದಷ್ಟು ಗೆಂಟಿಗೆ ಹೂಗಳನ್ನು ಹೊರಲಾಗದೆ ಬಾಗಿ ಹೋದ ಜಡೆಗಳಲ್ಲಿ ನೇಲಾಡಿಸಿಯೋ... ಇಲ್ಲ ದಂಡೆಯ ಹಣೆದು ಗಂಭಿರವಾಗಿ ಇದ್ದ ಮುಡಿಗಳಲ್ಲಿಯೋ ಬಿಗಿ ಬೊಂದೊವಸ್ತು ಮಾಡಿ... ಹೂವು ಹಳೆಯ ವಾಸನೆ ಬರುವ ವರೆಗೂ ಮುಡಿದಿದ್ದೇವೆ ಎಂಬುದನ್ನು ಮರೆತು...ಇನ್ನೊಬ್ಬರ ತಲೆಯ ಮೇಲೆ  ಕಣ್ಣಿರಿಸಿ  ಬಣ್ಣಕ್ಕೆ ಮಾರುಹೊಗುತ್ತಿದ್ದ ಸಮಯ ಈಗ ಕೈನಲ್ಲಿ ಇಲ್ಲ!ಕೋಕೋ ಹಣ್ಣನ್ನು ತಿಂದು ವ್ಯಾಕ್ ಎಂದವರು, ಚಪ್ಪರಿಸಿದವರು,  ಚಿನ್ನಿದಾಂಡು ಆಡುವಾಗ ಕೆರೆಯಲ್ಲಿ ಬಿದ್ದು ಸದ್ದಿಲ್ಲದೇ ಮೈಯ ತೊಳೆದು ಕೊಂಡವರು, ಮಾವಿನ ಕಾಯಿ ಕೊಯ್ದು ಕೊಟ್ಟವನಿಗೆ ಪಂಗನಾಮ ಹಾಕಿ  ಟಾಟಾ ಅಂದವರು.. ಪಾಸಾಗಿ ನಾನು ಫಸ್ಟ್   ಎಂದು ಬೇರೆ ಕಡೆಯಿಂದ ಬಂದ ನಮಗೆ ಸುಳ್ಳನ್ನು ಹೇಳಿ ಎಸ.ಎಸ.ಎಲ್.ಸಿ ಯಲ್ಲಿ ಡುಮ್ಕಿ ಹೊಡೆದವರು.. ಭಟ್ಟರ ಮನೆಯ ಮೊಗೆ ಬಳ್ಳಿಯನ್ನು ಸದ್ದಿಲ್ಲದೇ ನಾಪತ್ತೆ ಮಾಡಿ.. ಸೈ ಎನ್ನಿಸಿಕೊಂಡ ಧೀಮಂತರು! ಸಗಣಿಯನ್ನು  ತಿಂದು "ಭರ್ಜರಿ ಮಾಣಿ" ಎಂಬ ಪಟ್ಟ ತಾನೇ ಕಟ್ಟಿ ಕೊಂಡವನು, ಕಣ್ಣ ಮುಚ್ಚಾಲೆ ಆಡಲು ಹೋಗಿ ಅಡಗಿ ಕೊಂಡು ಅಲ್ಲೇ ನಿದ್ದೆ ಮಾಡಿ, ಮನೆಯವರಿಂದ ಉಗಿಸಿ ಕೊಂಡವರು, ಇವರೆಲ್ಲ ಜಗತ್ತಿನ ಯಾವುದೋ ಭಾಗಕ್ಕೆ ಏನನ್ನೋ ಹುಡುಕಿ ಹೋಗಿದ್ದಾರೆ. ಗೆಂಟಿಗೆ ಕಾಲ ಮುಗಿದು ಚಳಿಗಾಲ ಕಳೆದು ಪರೀಕ್ಷೆಯ ಫಲಿತಾಂಶ  ನಿರ್ಧಾರಿತ ದಿನಾಂಕ ನಿನ್ನೆ ಮೊನ್ನೆ ಆಗಿದೆ ಮುಗಿದಿದೆ. ೧೦೦ ಕ್ಕೆ ೧೦೦ ಪಾಸು ಅಂತ ಗೊತ್ತಿದ್ದೂ ತಿರಗ ಬರುವಾಗ ನಾನು ಪಾಸು ಎಂದು ಸಂತೋಷ ಪಡುವ ಗೆಳೆಯರು , ಶಾಲೆಯ ಎದುರಿಗೆ ಒಂದು ಕಲ್ಲು ಒದೆಯುತ್ತ , ಎಷ್ಟೋ ಕಿಲೋಮೀಟರು ಆ ಕಲ್ಲನ್ನೇ ಗುರಿಯಾಗಿಸಿ ಮನೆ ತಲುಪುವ ಘಳಿಗೆ .... ಒಂದು ಸಲ ನಿಮಗೂ ಅನ್ನಿಸುವದಿಲ್ಲವೇ ...? ನಮ್ಮ ಕೈ ತಪ್ಪಿದ ಸಮಯ ಎಂದು?
ಯಾಕಾದರೂ ಶಾಲೆ ಮುಗಿಯಿತೋ? ನಾವಿಲ್ಲದೇ ಆ ಗೇರು ಮರ, ಸಂಪಿಗೆ ಮರಗಳು ಎಷ್ಟು ಅನಾಥ ಪ್ರಜ್ಞೆಯಿಂದ ನರಳುತ್ತವೋ ... ಎಂಬ ಭಾವ ಅಂದಿನ ಶಾಲಾ ಸಮಯದವು. ಹಸಿ ಗೇರು   ಬೀಜದ ಮೂತಿಯನ್ನು  ಉಜ್ಜಿ ಉಜ್ಜಿ  ಜೋರಾಗಿ ಕಾಲಲ್ಲಿ ಒತ್ತಿ ದಾಗ  ಪಿಚ್ ಎಂದು ಹೊರಗೆ ಬರುವ ಹುಂಗಿನಲ್ಲಿ ಅದೇನು ರುಚಿ! ಗೇರು ಬೀಜದ ಕಲೆಯಾಗ ಬಾರದು ಎಂದು ಗೇರು ಹಣ್ಣಿನ ರಸದಲ್ಲಿ ತಿಕ್ಕಬೇಕೆನ್ನುವ ಸಂಶೋಧನೆಯ  ಹಕ್ಕು ಸ್ವಾಮ್ಯ ಯಾರದೋ ಬಲ್ಲವರು ಯಾರು.. ಅದಕ್ಕಾಗಿ ಜಗಳವೂ ಇಲ್ಲವಲ್ಲ!
ಗೇರು ಹಣ್ಣಿನ ಮೇಲೆ ಉಪ್ಪನ್ನು ಸವರಿ... ಆಹಾ... ಅದೇನು ಅದ್ಭುತ ಸವಿ...

........................
ಎಷ್ಟು ಬೇಗ ಕಳೆಯಿತು ಸುಂದರ ಬಾಲ್ಯ... ಅಜ್ಜನ ಮನೆಗೆ ೨-೩ ವರ್ಷಕ್ಕೆ ಒಮ್ಮೆ ಹೋಗುವ ಘಳಿಗೆ ಈಗ ವರ್ಷಕ್ಕೆ ಒಮ್ಮೆ ಬಂದರು ಆ ಮಜಾ ಸಿಗುತ್ತಿಲ್ಲ. ಆಗಿನ ಒಂದು ಎರಡು ಹೊಸ ಅಂಗಿ ಇಂದು ಕಬಾರ್ಡಿನ ತುಂಬೆಲ್ಲ ಇರುವ  ರೇಷ್ಮೆಯ ಯಾವ ಡ್ರೆಸ್   ಅದಕ್ಕೆ ಸಮ ಅಲ್ಲ. ಅಂದಿನ ಹವಾಯಿ ಚಪ್ಪಲ್ಲಿಗೆ ಇಂದಿನ ಯಾವುದೇ ಹೈ ಹೀಲ್ಡ್  ಸರಿ ಸಾಟಿ ಅಲ್ಲವೇ ಅಲ್ಲ. ಕೇರಳ ಕ್ಕೆಂದು( ಅಜ್ಜನ ಮನೆ) ಹೋಗುವಾಗ ಸಂಭ್ರಮಿಸುವ ರೀತಿ ,ಬರುವಾಗಿನ ಬೇಸರ... ಇಂದು ಮಾಮೂಲು. ಭಾವನೆ ಚಿಕ್ಕದಾಗಿದೆ!
ಹೀಗೆಲ್ಲ ನೆನಪಾಗಿದ್ದು ಮಾವ " ಯಾವಾಗ ಅಜ್ಜನ ಮನೆಗೆ  ಬಪ್ಪದು"  ಎಂದು ಕರೆ ಮಾಡಿದಾಗ. ಪ್ರೀತಿಯ ಅಜ್ಜಿಗೆ ವಯಸ್ಸು ಆಗಿ, ಕೂಗಿ ಹೇಳಬೇಕು. ಮಾವನಿಗೆ ತನ್ನ ಮಗನ ಮಗಳ ವಿದ್ಯಾಭ್ಯಾಸ , ಭವಿಷ್ಯದ ಚಿಂತೆ, ಅತ್ತೆಗೆ ಸಂಸಾರ...ಜವಾಬ್ದಾರಿ... ನಡುವೆ ನಮ್ಮನ್ನು ಪ್ರೀತಿಯಿಂದ  ಕರೆಯುವ ಪರಿಗೆ ಓ ಅಂದು ಹೊರಟಿದ್ದೇವೆ. " ಒಂದೆರಡು ದಿನ ಇರೆಕ್ಕು... "ಪಾಲ್ ಪಾಯಸ " ಮಾಡುತ್ತೇನೆ ಎಂದ ಮಾವನಿಗೆ ಹುಂ ಅಂದಿದ್ದೇನೆ. ಉದಯ್ ನ ನಿರಂತರ ಕೆಲಸಕ್ಕೆ ಸ್ವಲ್ಪ ವಿರಾಮ ..ಅವನು ಉಮೇದಿನಿಂದ ಹೊರಟಿದ್ದಾನೆ...ಟಾಟಾ ಹೋಗುವದಿದ್ದು ಎಂದಾಗಲೆಲ್ಲ ಊಟ  ಸರಿಯಾಗಿ ಮಾಡುವ ಮಗ, ಮುಂದಿನ ವಾರದ ಕೆಲಸವನ್ನೆಲ್ಲಾ ಮೊದಲೇ ಮುಗಿಸ ಬೇಕೆಂದು ಯೋಜನೆಯಲ್ಲಿ ಉದಯ್,......... ಜಯನಗರ  , ಮಂತ್ರಿ ಸ್ಕ್ವೇರ್ , ಕಮರ್ಷಿಯಲ್ ಸ್ಟ್ರೀಟ್, ಎಂದು ಎಲ್ಲೂ ಸರಿಯಾಗದೆ ಹತ್ತಿರದ ಗಾಂಧೀ ಬಜಾರ್ ನಲ್ಲೆ ಶಾಪಿಂಗ್ ಮಾಡಿದ ನಾನು, ....
ಅಂದು ಅಪ್ಪನ ಒಂದು ಸುಟ್ ಕೇಸ್ ನಲ್ಲೆ ಇಡಿ ಸಂಸಾರದ ಬಟ್ಟೆ -ಬರೆಯ ಹೊರುವಿಕೆ; ಇಂದು ೩ ಜನರಿಗೆ ಬರೋಬ್ಬರಿ ೪ ಬ್ಯಾಗ್ ಹೊತ್ತು.. ಪ್ರಯಾಣ ಆರಂಭ.
     ಪ್ರಯಾಣಕ್ಕೆ ನಿಮ್ಮ ಹಾರೈಕೆ- ಆಶೀರ್ವಾದ ಇರಲಿ ಸದಾ!

 ---------------------- ತರಾತುರಿಯಲ್ಲಿ ಮೂಡಿದ ಬರಹ
                            ಚಂದ್ರಿಕಾ ಹೆಗಡೆ 

08 ಏಪ್ರಿಲ್ 2011

ಎಚ್ಚರಿಕೆ

ಭಾವಕ್ಕೆ ವೇಷ ತೊಡಿಸಿ 
ಸಿಕ್ಕಿದ್ದನೆಲ್ಲಾ  ಬಯಲಿನಲ್ಲಿ  ತೆರೆದಿಡಬೇಡ...
ಬಿರುಗಾಳಿ ಬಂದು ತರಗೆಲೆಯಾಗಿ 
ಚಿಂದಿಯಾದೀತು ಜೋಕೆ!

ಹೆಣೆದ ಮಾತನ್ನು ಹಂಚಿಕೊಳ್ಳದಿರು
ಬಲೆಯಲ್ಲಿಯ ಮೀನಿನಂತೆ 
ನಿನ್ನ ಮನ ವಿಲಿ ವಿಲಿ ಒದ್ದಾಡೀತು ಜೋಕೆ!

ಸಿಕ್ಕಂತೆ ಸಿಕ್ಕರೂ ಜನ
ಸ್ನೇಹಿತರು, ಗೆಳೆಯ-ಗೆಳತಿಯರು
ಕುದಿವ ಮನಕೆ ಆರೈಕೆ ನೀಡಲು 
ತಣಿಯದಿರು....
ಕಾದ ಎಣ್ಣೆಯಲ್ಲಿ ಹಾಕಬಹುದು ಹುಷಾರು!
ಹೋಳಿಗೆ ನೀಡುವ ನೆಪದಲಿ--
ಕಾದ ಕಬ್ಬಿಣವ  ಕಿವಿಗಿಡಬಹುದು,
ಗಾಯದ ಮೇಲೆ ಬರೆಯೂ .....
ಜತನವೆಂಬುದು ನಿನ್ನ ಜವಾಬ್ದಾರಿ...

..............................................ಚಂದ್ರಿಕಾ ಹೆಗಡೆ