24 ಜನವರಿ 2011

ಮಲೆನಾಡಿನ ಮಳೆಗಾಲದ ಆ ದಿನಗಳು


ದಿನಗಳು ವರ್ಷಗಳು ಕಳೆಯುತ್ತಲೇ ಇರುತ್ತವೆ . ನಿನ್ನೆಯ ನೆನಪುಗಳ ಜೊತೆ ಇಂದಿನ ಪರಿಸ್ಥಿತಿಯ   ಹೆಜ್ಜೆ ಹಾಕುವಾಗ ನಾಳೆಯ ಭರವಸೆಯೂ ಮುಂದಿರುತ್ತದೆ . ಹೀಗೆ ಕಳೆದ ದಿನಗಳ ಮೆಲುಕು ಇಲ್ಲೊಂದು ಘಳಿಗೆ ..........



ಮೂಲತಃ ಮಲೆನಾಡಿನವಳಾದ ನನಗೆ ಇನ್ನು ಹಚ್ಚ ಹಸಿರಾಗಿ ಮನದ ತುಂಬೆಲ್ಲ  ತುಂಬಿರುವ ಸಮಯ ಮಳೆಗಾಲದ್ದು.  ಪ್ಲಾಸ್ಟಿಕ್  ಕೊಪ್ಪೆ< ಪ್ಲಾಸ್ಟಿಕ್ ಹಾಳೆಗಳನ್ನು ಮಡಚಿ ಅದನ್ನು ಹೊಲಿಸಿ ಹಾಕಿಕೊಳ್ಳುತ್ತಿದ್ದೆವು.> ಸರಿಯಾಗಿ ರೇಡಿಯೋ ದಲ್ಲಿ  ಚಲನಚಿತ್ರ ಗೀತೆ ಮುಗಿದು , " ಆಕಾಶವಾಣಿ ಧಾರವಾಡ ,  ಇಲ್ಲಿಗೆ ಕನ್ನಡ ಚಿತ್ರಗೀತೆಗಳನ್ನು ಕೇಳಿದಿರಿ. ಇನ್ನು ಮುಂದೆ  ಸರಿಯಾಗಿ ೮ ಗಂಟೆಗೆ ಇಂಗ್ಲಿಷ  ಹಾಗು ಹಿಂದಿ ವಾರ್ತಾ ಪ್ರಸಾರ ದೆಹಲ್ಲಿ ಕೇಂದ್ರದಿಂದ " ಎಂದು ಹೇಳುತ್ತಿದ್ದಾಗ ಮನೆಯಿಂದ ಹೊರಡಲೇ  ಬೇಕು. ಅಪ್ಪನ ಜೊತೆಗೆ ಹೊರಡುತ್ತಿದ್ದೆವು. ನಾನು ಅಕ್ಕ ಪಕ್ಕದ ಮನೆಯ ಸುಜಾತಾ ಮಂಗಲ.... ಮನೆಗಳು  ದಾಟಿದ ಹಾಗೆ ಹುಡುಗರ ಸಂಖ್ಯೆಯು ಜಾಸ್ತಿ...
ಮಳೆಗಾಲದಲ್ಲಿ ಹೊಸ ಕೊಪ್ಪೆ ಹೊಲಿಸಿದರಂತು  ಲೆವೆಲ್ ಸ್ವಲ್ಪ ಜಾಸ್ತಿ!

ಮಳೆಗಾಲದ ದಿನಗಳಲಿ ಪ್ಲಾಸ್ಟಿಕ್ ಕೊಪ್ಪೆಯಲ್ಲಿ  ರಕ್ಷಿಸಿಕೊಂಡು , ತುಂಬಿದ ಹಳ್ಳಗಳನ್ನು ಭಯ - ವಿಸ್ಮಯಗಳಿಂದ ದಾಟುತ್ತಿದ್ದ ಆ ಕಾಲ  ಈಗ ಎಲ್ಲಿದೆ. ಇಂದು ವಾತಾವರಣ ವೈಪರೀತ್ಯಗಳಿಂದ ಮಳೆ ಯಾವಾಗ ಬೇಕಾದರೂ ಬರಬಹುದು!
 ನಾನು ಇನ್ನು ಬಾಲವಾಡಿಯಲ್ಲಿ ಕಲಿಯುತ್ತಿದ್ದೆ.< ಆವಾಗ ಕಲಿಯುವದಲ್ಲ  ಬಾಲವಾಡಿ ಅಂದ್ರೆ ಆಟ ಅಷ್ಟೇ. !> ಬೆಳ್ಳಿಗ್ಗೆ ೮ ಗಂಟೆಗೆ ನಾನು ಅಕ್ಕಂದಿರು ಪಕ್ಕದ ಮನೆಯ ಮಕ್ಕಳೂ  ಸೇರಿ ಹಳ್ಳ ದಾಟುತ್ತಿದ್ದೆವು. ನಾನು ಚಿಕ್ಕಂದಿನಿಂದಲೂ ಸಿಕ್ಕಾಪಟ್ಟೆ ತರ್ಲೆ. ಸರಿ ಎಲ್ರು ಹಳ್ಳ ದಾಟಿದರು ... ನಾನು ಪಕ್ಕದ ಮನೆಯ ಅನ್ನಪುರ್ಣಕ್ಕ ದಾಟಬೇಕಿತ್ತು.  ನಾನು ಹಾಗೆ ಆ ಜಾರಿಕೆಯ ಸಂಕದಲ್ಲಿ ಹೋಗುತ್ತಿದ್ದೆ  ಅಷ್ಟರಲ್ಲಿ  ಕ್ಷಣಾರ್ಧದಲ್ಲಿ ಜಾರಿ ಬಿದ್ದೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ! ಆ ವೇಳೆಗೆ ನನ್ನ ಚಿಂತೆ ನನ್ನ ಪಾಟಿ ಚೀಲ ಒದ್ದೆ ಆಗಿ ನನ್ನ ಹೊಸ ಮಗ್ಗಿ ಪುಸ್ತಕ ಹಾಳಾದರೆ! ಆ ವೇಳೆಗೆ ಅದೇನು  ವಿಚಾರ ನನ್ನಲ್ಲಿ ಬಂದಿತ್ತೋ ಇಂದಿಗೆ ನೆನಪಾಗುತ್ತಿಲ್ಲ .... ಅಲ್ಲಿರುವ ಚಿಕ್ಕ ಮಾವಿನ ಗಿಡವನ್ನು ಜೊತೆಗೆ ನನ್ನ ಕೊಪ್ಪೆ ಪಾಟಿಚೀಲವನ್ನು ಸೇರಿಸಿ ಆ ಗಿಡವನ್ನು ಗಟ್ಟಿ ಹಿಡಿದುಕೊಂಡೆ.  ಅಕ್ಕ ಚಂದ್ರಿ ಬಿದ್ದು ಹೋದಳು ಅಂತ ರಾಗ ಶುರು ಮಾಡಿದಳಂತೆ. ಅನ್ನಪುರ್ಣಕ್ಕ ಧೈರ್ಯ ಮಾಡಿ ಹಳ್ಳದಲ್ಲಿ ಇಳಿದು  ನನ್ನ ಎಳೆದುಕೊಂಡು ಬಂದು ಮಲಗಿಸಿದಳಂತೆ. ಅಷ್ಟೊತ್ತಿಗೆ ಅಪ್ಪ ಅಮ್ಮ ಬಂದು  ಉಲ್ಟಾ ಮಲಗಿಸಿ ನೀರೆನಾದ್ರೂ  ಕುಡಿದಿದ್ರೆ ಅಂತ ವಾಂತಿ ಮಾಡಿಸಿದರಂತೆ......
ಇಲ್ಲಿ ನಂಗೆ ನೆನಪಿರುವ ವಿಷಯ ನಾನು ಅಂದು ಹೊಸ ಅಂಗಿ ಹಾಕಿದ್ದೆ ...  ಅದು  ಡಾಟ್ ಡಾಟ್ ಇದ್ದ ಲೈಟ್ color ಅಂಗಿ....
 ಇಂದು ಆ ಮಾವಿನ ಗಿಡವೂ ಇಲ್ಲ.. ರಕ್ಷಿಸಿದ   ಆ ಅಕ್ಕನೂ ಇಲ್ಲ...

 ಛತ್ರಿ ಇದ್ದವರನ್ನ ನೋಡಿ  ಅವರೆಷ್ಟು ಶ್ರೀಮಂತರಪ್ಪ ಎಂದು ಅಂದುಕೊಳ್ಳುವ ಆ ದಿನಗಳಲಿ ಕಾಲಿಗೆ ಚಪ್ಪಲ್ಲಿನ ಅಗತ್ಯ ಇದೆ ಅಂತ ಅನ್ನಿಸಿರಲಿಲ್ಲ . ಈಗಿನ "high healed " ಮಾತೆಂತೂ ಎಲ್ಲಿ?  ಛತ್ರಿಯನ್ನು ಹಿಡಿದು ಕನ್ನಡ ಶಾಲೆಗೇ ಹೋದ ಮೊದಲ ದಿನ ನನ್ನನ್ನು ಹುಡುಕಿಕೊಂಡು ಬಂದ ಇನ್ನೊಂದು ಆಸೆ : ನಾವು ಈ ಛತ್ರಿಯನ್ನು ಕೈಯಲ್ಲಿ ಹಿಡಿಯದೆ ನಾವು ನಡೆದಂತೆಲ್ಲ ತನ್ನಷ್ಟಕ್ಕೆ ಆ ಛತ್ರಿ ತಾನಾಗಿ  follow  ಮಾಡಬೇಕಿತ್ತು.. !
ಮಳೆಗಾಲದ ದಿನಗಳಲ್ಲಿ ನಮ್ಮ ಶಾಲೆಯ ರೆಸ್ಟ್ ಟೈಮ್ ನ ದೇವರ ಪೂಜೆನೂ  ಬಂದ್ .

 ಈಗ ಬೆಂಗಳೂರಿನ ಮಳೆಗಾಲವನ್ನು ನೋಡುತ್ತಿದ್ದೇನೆ .... ಈಗಿನ ಮಕ್ಕಳು ನಿಜ ಮಳೆಗಾಲದ ಸುಖವನ್ನು ಕಾಣಲಾರದ ಬಗೆಗೆ ನನ್ನಲ್ಲಿ ವಿಷಾದವಿದೆ . ಅಷ್ಟೇ ಅಲ್ಲ ಕಾಲ ಬದಲಾದ ಹಾಗೆ ಆ ಆಟದ ಆಸಕ್ತಿಯ ದಿಕ್ಕು ಬದಲಾಗಿದೆ. ಪಾಲಕರ ಪಾಲನೆಯಲ್ಲೂ ವ್ಯತ್ಯಾಸವಾಗಿದೆ ..... ಮಳೆಯಲ್ಲಿ ನೆನೆದರೆ ಅಮ್ಮ ಮಾಡಿಕೊಡುವ ಕಷಾಯದ ಬದಲಾಗಿ crocin .... ಮೊದಲಾದ ಮಾತ್ರೆ ಕುಳಿತಿವೆ.  ಮಾಡಿಕೊಡುವ ಪುರುಸೊತ್ತು , ಸಾಮಗ್ರಿಗಳು ಮನೆಯ ಮುಂದಿನ ತೋಟದಲ್ಲಿ ಮಾಯವಾಗಿದೆ... ತೋಟವೂ.... ಮಕ್ಕಳೆಲ್ಲ ಬೆಂಗಳೂರಿನಲ್ಲಿ ಇದ್ದಾರೆ ಎಂದು ಅಪ್ಪ ಅಮ್ಮ ತೋಟವನ್ನು ಮಾರುತ್ತಿದ್ದಾರೆ.... ಇನ್ನೆಲ್ಲಿದೆ ಆ ದಿನಗಳ ನೆನಪು?  ಇನ್ನು ಎಂದಾದರು tour  ಎಂದು ಹೋದರೆ?... ನಮ್ಮ ಜಾಗಕ್ಕೆ....

ಕಿವಿಯಲ್ಲಿ... ಮನದಲ್ಲಿ... ಕಣ್ಣಲ್ಲಿ....ನೆನಪು ಮಾತ್ರಾ ಶಾಶ್ವತ.

                                                      ಇಂದಿಗೂ ಮಲೆನಾಡ ಮಗಳು ಎಂಬ ಹೆಮ್ಮೆಯಿಂದ..........
                               ಚಂದ್ರಿಕಾ ಹೆಗಡೆ

1 ಕಾಮೆಂಟ್‌:

  1. ಚಂದ್ರಿಕಾ,
    ಬದುಕು ಎಷ್ಟು ವಿಚಿತ್ರ
    ಕಳೆದ ಕ್ಷಣಗಳ ನೆನಪು ಇಂದಿನ ಮಕ್ಕಳಿಗೆ ಸಿಗುತ್ತಿಲ್ಲ
    ನಮ್ಮ ಬಾಲ್ಯದ ಮಜವೇ ಬೇರೆ
    ಈಗ ಮಕ್ಕಳಿಗೆ ಕಾರಿದೆ, ಮಳೆಗಾಲದ ಮಜವೇ ಗೊತ್ತಿಲ್ಲ
    ನಿನ್ನ ಬರಹಗಳಲ್ಲಿ ಅಲ್ಲಲ್ಲಿ ಸಣ್ಣ ತಪ್ಪುಗಳಿವೆ
    ಉದಾಹರಣೆಗೆ ದೆಹಲಿ ಬದಲು ದೆಹಲ್ಲಿ ಆಗಿದೆ
    ಅದನ್ನು ತಿದ್ದಿಕೋ
    ಸುಂದರ ಬರಹ

    ಪ್ರತ್ಯುತ್ತರಅಳಿಸಿ