27 ಜನವರಿ 2011

ಕಾಲೇಜ್ ವಾತಾವರಣ

                         


 ನಿಜಕ್ಕೂ ಹೇಳಲು ಮುಜುಗರ  ಹಾಗು  ವಿಷಾದ ಅನ್ನಿಸುವದು ಈ ವಿದ್ಯಾರ್ಥಿಗಳ ಬಗ್ಗೆ  .  ಯಾಕೆಂದರೆ ಚಿಕ್ಕವಯಸ್ಸಿನ ಈ ಮಕ್ಕಳಲ್ಲಿ ಅದೆಂಥಾ ಚಟಗಳು ಅಂಥಾ.  ಹೀಗೆ ಕಾಲೇಜ್ ಗೆ  ಹೋಗ್ತಾ ಇದ್ದೆ. ಬೆಂಗಳೂರಿನ ಈ ವಿದ್ಯಾರ್ಥಿಗಳಿಗೆ  ನನ್ನ ಪರಿಚಯ ಸಿಕ್ಕಿಲ್ಲ..  ನಾ ನೋಡುತ್ತಿದ್ದೆ ನನ್ನ ವಿದ್ಯಾರ್ಥಿಗಳೇ  ಒಂದು ಚಿಕ್ಕ ಪಾನ್ ಶಾಪ್  ನಲ್ಲಿ ಒಂದೊಂದು  ಸಿಗರೇಟು ಹಿಡಿದು ಆರಾಮಾಗಿ ಹೊಗೆ ಎಳೆಯುತ್ತ ನಿಂತಿದ್ದರು. ಅವರಲ್ಲೊಬ್ಬ  ನನ್ನ ನೋಡಿ " ಏ ಮಗಾ ಕನ್ನಡ ಮ್ಯಾಮ್" ಅಂದು ಸಿಗರೇಟನ್ನು ಕಾಲಡಿ ಹಾಕಿ ಹೊಸಕಿ  ಬಂದ. ಅವನು ಬಂದಿದ್ದು ನನ್ನನ್ನು ನೋಡಿ ಹೆದರಿ ಅಲ್ಲ ... ಏಕೆಂದರೆ ಇಂದಿನ ಕಾಲೇಜು ಹುಡುಗರಿಗೆ .... ಹುಡುಗಿಯರಿಗೂ .. ಹೆದರಿಕೆ ಮಾರುದೂರಾ. ಅವನು ಬಂದಿದ್ದ್ದು  " ಗುಡ್ ಮಾರ್ನಿಂಗ್ " ಅನ್ನುದಕ್ಕೆ.  ವಿಶ್ ಮಾಡಿದ್ರೆ  ಇಂಟರ್ನಲ್  ಸ್ಕೋರ್ ಹೆಚ್ಚು ಹಾಕ್ತಾರೆ ಅಂತ ಯಾರು  ಹೇಳಿದ್ರೂ  ನಾ ಕಾಣೆ . ಇಂಥ ಹೊಗೆ ಎಳೆದು  ಚುಯಿಂಗ್ ಗಂ  ಬಾಯಲ್ಲಿ ಹಾಕಿ ಬಂದ ಅಂಥವರಿಗೆ  ಪಾಠ ಮಾಡುವ  ವಾಕರಿಕೆ ನಡುವೆ  ನಗುವ ಕಾಯಕ  ನಮ್ಮದು. ಹಾಗಂತ ಎಲ್ಲ ವಿದ್ಯಾರ್ಥಿಗಳು ಹಾಗೆ ಅಂತಲ್ಲ.  ಆದ್ರೆ ನಾವು ತೀರ ವಿಚಾರಿಸಿದ ಪ್ರಕಾರ  ಮೊದಲ ವರ್ಷದ  ವಿದ್ಯಾರ್ಥಿಗಳು ಆರಂಭದ ಸೆಮಿಸ್ಟರ್ನಲ್ಲಿ ಚೆನ್ನಾಗೆ ಇದ್ದವರು  ನಂತರದಲ್ಲಿ ಕೆಟ್ಟ ಉದಾಹರಣೆ  ಇಲ್ಲಿದೆ. ಮಕ್ಕಳನ್ನು ಒಂದು ಒಳ್ಳೆಯ  ಕಲಿಕೆಗೆ ಹಾಕಬೇಕೆನ್ನುವ  ಅಪ್ಪ ಅಮ್ಮಂದಿರು  ಅದೆಷ್ಟು ನಿರೀಕ್ಷೆ. ಪ್ರೀತಿ... ಅರ್ಪಣೆ... ಇವರ ಸಿಗರೇಟಿನ ಹೊಗೆಯಲ್ಲಿ ಇವೆಲ್ಲ ಬೂದಿ!
ಒಂದರ್ಥದಲ್ಲಿ ಇಂದಿನ ಶಿಕ್ಷಣವೂ ಇದಕ್ಕೆಲ್ಲ ಕಾರಣವೋ ಏನೋ  ಅಂತಾ .  ಪ್ರಾಜೆಕ್ಟ್  ಮಾಡಲೇ  ಬೇಕು..  ಅದಕ್ಕೆ ಬೇಕಾದಷ್ಟು ಸಾಮಗ್ರಿ  ಹುಡುಕುವದಿಲ್ಲ ಬದಲು ಜಯನಗರದ ೪ ನೆ ಕ್ರಾಸ್ಸ್ನಲ್ಲಿ ಇಂಥದಕ್ಕೆನೆ ಒಂದು ಅಂಗಡಿ ಇದೆಯಂತೆ . ಅಲ್ಲಿ ಹೋಗಿ M .COM ... M B A ... B B M ... ಯಾವ ಕೋರ್ಸ್ ಅಂಥಾ  ಹೇಳಿದ್ರೆ ಆ ಕ್ಲಾಸ್ ನ ಪ್ರಾಜೆಕ್ಟ್ ರೆಡಿ  ಸಿ ಡಿ  ಕೊಡ್ತಾರಂತೆ . ಯಾರನ್ನು ಬೈಯೋಣ?
ಇನ್ನು "  ಹಿಂದಕ್ಕೆ ಗುರುವಿದ್ದ ಮುಂದಕ್ಕೆ ಗುರಿಯಿತ್ತು
           ಸಾಗಿತ್ತು ಧೀರರ ದಂಡು
            ಹಿಂದಕ್ಕೆ ಗುರುವಿಲ್ಲ ಮುಂದಕ್ಕೆ ಗುರಿಯಿಲ್ಲ
            ನುಗ್ಗುತ್ತಿದೆ ಹೇಡಿ ಹಿಂಡು"
ಎನ್ನುವ ಕಾರಣಕ್ಕೂ ಕೊರತೆಯೇನಿಲ್ಲ.  ಫುಲ್ ಟೈಮ್ ಕೆಲಸ ಇದ್ದವರೂ, ಅವರ confidential  ಕೆಲಸಾನೆ ಮುಗಿಯೋ ಲಕ್ಷಣ ಕಾಣ್ತಾ ಇಲ್ಲ. ಪಾರ್ಟ್ ಟೈಮ್ ಕೆಲ್ಸಾ ಮಾಡೋರಿಗೆ ಮುಂದೆ ಇನ್ನೆಲ್ಲೋ ಬೇರೆ ಕಾಲೇಜಿನಲ್ಲಿ  ತರಗತಿ ಇದೆ ಅಂತ ಓಡೊಗ್ತಾರೆ ... ಮಕ್ಕಳ ಗತಿ ದೇವರಿಗೆ ಪ್ರೀತಿ....  ಹೇಳಿ ಯಾರನ್ನು ಬೈಯೋಣ?
ಇಷ್ಟಾದರೂ  ಕೂಡ  ಎಷ್ಟೋ ಮಕ್ಕಳು ಒಳ್ಳೆಯ  ಅಂಕಗಳನ್ನು  ಪಡೆಯುತ್ತಿದ್ದಾರೆ ಅವರನ್ನು ಗುರುತಿಸುವರು ಇಲ್ಲ .
........?
ಹೀಗೆ ಮುಂದುವರೆದರೆ ಭವಿಷ್ಶದ  ಪರಿಸ್ಥಿತಿ  ಏನು.....  ಬಗೆಹರಿಯಲಾಗದ ಪ್ರಶ್ನೆ ನನ್ನಲ್ಲಿ...  ಚಟಗಳೂ... ಶಿಕ್ಷಣವೂ .... ಅವರ ಉಡುಗೆ ..... !
ಲೈಬ್ರರಿ ಒಳಗೆ ಧೂಳು ಹಿಡಿಯುತ್ತಿರುವ ಪುಸ್ತಕಗಳು ಅಣಕಿಸುವ ಹಾಗೆ... ಎಷ್ಟೂ ಅಪ್ಪ ಅಮ್ಮಂದಿರ ಮುಖಗಳು ನೋವಿಂದಾ ಕುದಿಯುತ್ತಿರುವ ಹಾಗೆ...
 ವಿಷಾದವೇ  ಇಲ್ಲಿ ಪ್ರಧಾನವಾಗಿದೆ .         
ಸದಾ ಒಳ್ಳೆಯ ನಿರೀಕ್ಷೆಯಲ್ಲಿ ಕಾಯುವಿಕೆ ನನ್ನದು
        ಚಂದ್ರಿಕಾ ಹೆಗಡೆ

25 ಜನವರಿ 2011

ಅರ್ಥವಾಗಿದೆ




ಅಮ್ಮಾ,
ಅಂದು, ನಿನ್ನ ಗರ್ಭದಲ್ಲಿ ನಾ ಮೂಡಿದ
ಕ್ಷಣಗಳಲ್ಲಿ ಬೇಸರಗೊಂಡಿದ್ದೆ.
ಸಣ್ಣ ಜಾಗೆಯಲ್ಲಿ , ಕತ್ತಲು ಬೇರೆ
ಬೆಳೆಯುವದು ಎಲ್ಲಿ ಎಂದು.
ನಿನ್ನ ಮನದ ಹೊಯ್ದಾಟ ನನಗರಿವಿರಲಿಲ್ಲ.

ಕಾಲ ಸರಿಯುತ್ತಲೇ -
ನಾ ನಿನ್ನ ಗರ್ಭಾಗಾರವನ್ನು ಆವರಿಸಿದ್ದೆ
ಹೊರಬರಲು ಕಿಂಚಿತ್ತೂ ಮನಸಿರಲಿಲ್ಲ
ನಿನ್ನ ಕರಸ್ಪರ್ಶದ ಹಿತಾನುಭವ
ಒಳಗಿನಿಂದಲೇ-
ನಿನ್ನ ಮನದ ಬಯಕೆ- ನನ್ನದೂ ಆಸೆ
ನಾ ಒದೆಯುವಲ್ಲಿ ನೀ  ತಡವುತ್ತಿದ್ದೆ ..
ನಿನ್ನ ಮಾತಿಗೆ ನನ್ನ ಉತ್ತರ
ಅದೇ ಒದೆತವೆ  ...
ಆದರೂ, ನಿನ್ನ ಮನದ ಬೇಗುದಿ ತಿಳಿಯುತ್ತಿರಲಿಲ್ಲ.


ಇಂದು,
ನೀ ಅಂದು ಸಣ್ಣ ಜಾಗೆಯಲ್ಲಿ ಕತ್ತಲಲ್ಲಿ
ಬೆಳೆಸಿದ್ದರ ಬಗೆಗೆ ಚಿಂತಿಸುತಿರುವೆ
ಇಂದು ಬಯಲಿನಲ್ಲಿ, ಬೆಳಕಿನಲ್ಲಿ  ನಾ
ಇರುವದರ ಕುರಿತೂ_
ನಿನ್ನ ಮನದ ಅಂದಿನ ತೊಳಲಾಟ
ಇಂದಿಂಗೆ ಸ್ವಲ್ಪ ಅರಿವಾಗುತ್ತಿದೆ.
ಹೊಟ್ಟೆಯಲ್ಲಿ ಆವರಿಸಿಕೊಂಡಿದ್ದ
ನನ್ನ ಹೊರ ಹಾಕಿ ಜಗತ್ತಿಗೆ ತೋರಿಸುವ
ನಿನ್ನ ಪ್ರಯತ್ನ, ಬೇನೆ
ಬಂದ ಮೇಲೆ ಮುಂದುವರೆಸುತ್ತಲೇ ಹೋದ
ನಿನ್ನ ಪ್ರೀತಿ , ಅಂತಃಕರಣ , ವಾತ್ಸಲ್ಯ....
ನಿಘಂಟಿನಲ್ಲಿ ಹುಡುಕಿದ್ದೇನೆ
ಶಬ್ದದ ಪೂರೈಕೆ ಸೀಮಿತವಾಗಿದೆ ,,ಅಮ್ಮಾ, ಕ್ಷಮಿಸು
ಅಂತೂ....
ನಿನ್ನ ಮನದ ಬೇಗುದಿ ಇಂದು
" ಅರ್ಥವಾಗಿದೆ"

24 ಜನವರಿ 2011

ನಿನ್ನ ನೆನಪ ಹೊತ್ತು



  ಕಡಲು ಕಾಯುವದಿಲ್ಲ ಗೆಳತಿ ,
ಕಣ್ಣಿಗಿಷ್ಟೇ ! ಅಷ್ಟಗಲ ಗೋಚರ 
ನಿನ್ನ ಕಣ್ಣಂಚಿನ ಬಿಂದುಗಿಂತಲೂ 
ಉಪ್ಪು, ನದಿ ನೀರು ಸೇರುತ್ತಿದ್ದರೂ....
ಕಾಲ ಕಾಯುವದಿಲ್ಲ ಗೆಳತೀ,
ಅಗೋಚರ, ಕ್ಷಿಪ್ರಗತಿ
ನಿನ್ನ ನೆನಪು ಮರುಕಳಿಸಿದಾಗಲಂತೂ 
ನಿಶ್ಚಲವಾಗಬಾರದೇ ? ನನ್ನ ಕೇಳೀತೇ?
ನಿನ್ನೊಪ್ಪಿಗೆಯೊಂದೆ ಸಾಕೆನಗೆ 
ತಿರುಗಿಸಲು ಮರುಕಳಿಸಲು 
ಅನೂಹ್ಯ ತೆರೆಗಳಿಗೆ   ಬರವಂತೂ ಇಲ್ಲ
ಕಡಲ ಗಂಭೀರ , ಕಾಲ ಗತಿ  ನಿಲ್ಲಬಾರದೇ ?
 ಕಡಲು ಸಹನೆಯಿಂದ ಇರುವದಿಲ್ಲ ಗೆಳತೀ 
ನಿನ್ನ ಮುಗ್ಧತೆ,  ಕಾಯುವಿಕೆ ಅದಕ್ಕೆಲ್ಲಿ ಬರಬೇಕು ?
ಕಾಡುತ್ತದೆ, ಸುಮ್ಮಸುಮ್ಮನೆಯೇ
ನಿಂತಲ್ಲಿ ನಿಲ್ಲದ ಭಾವ ಹೊಮ್ಮಿಕೆಗಳು
ನಿಶ್ಶಬ್ದತೆಯಿಂದ  ಸೋರಿಹೋಗುತ್ತದೆ
ಗೊತ್ತಿಲ್ಲದೆಯೇ ...
ಬಾಳ ಬಿಂಬದಲ್ಲಿ ನಿನ್ನ ನೆರಳು !
ಕಂಡೀತೆ ? ಒಮ್ಮೆ- ತಿರುಗಿ ನೋಡಲೇ ?
ಬಿಟ್ಟ ಮನದ ಸಂಗದಲ್ಲಿ 
ಒತ್ತೊತ್ತಾಗಿರುವ ಯಾವ ನೆನಪ ಕರೆಯಲಿ ?
ದೂರ ಸಾಗರದಲ್ಲಿ  ಮಿಂಚಿನಗತಿಯಲ್ಲಿ
ಹೊರಟು ನಿಂತ ನಿನ್ನ ....  ಮರು ನುಡಿಯದೇ
ಕಡಲು ದೂಡಿ- ದೂಡಿ ತರಬಾರದೇ ?
ಅಲೆಯೊಂದಿಗೆ  ನಿನ್ನ
ದಡಕ್ಕೆ - ನನ್ನೀ ಸನಿಹಕ್ಕೆ
ನಿನ್ನ ನೆನಪ ಹೊತ್ತು ಕಡಲ ಕಾಯುತ್ತಿರುತ್ತೇನೆ .


                                           ಕಡಲ ಹತ್ತಿರ ಕಾಯುವದು ಇಲ್ಲವಾದರೂ, ಕರೆಗಾಗಿ ಕಾಯುತ್ತಿರುವ
                                                                  ಚಂದ್ರಿಕಾ ಹೆಗಡೆ
  

ಸಾಲದಾಗಿದೆ ಕಾಲ !


ಒಂದೊಂದು ಯುಗವೇ ಬೇಕು
ಕಂಡ ಕನಸುಗಳ ಸಾಕಾರಕ್ಕೆ
ಬೆಂದ ಮನಸುಗಳ ಉಪಶಮನಕ್ಕೆ
ನುಡಿದಂತೆ ನಡೆಯುವ ಕಾಯಕಕ್ಕೂ ...


ಒಂದೊಂದು ಯುಗವೂ ಸಾಲದು
ಬಂದ ಭಾವಗಳಲೆಲ್ಲಾ  ಮಿಂದು ಬಂದರೆ
ಕಂಡ ಕನಸುಗಳೆಲ್ಲಾ  ನನಸಾಗಹೊರಟರೆ
ಸುಪ್ತ ಬಯಕೆಗಳ ಚೆಲ್ಲಾಟಕ್ಕೂ....


ಒಂದೊಂದು ಘಳಿಗೆಯೂ 
ಮೌನ ವಾಗಿಯೇ  ಇರುವದೇ ಆಗಿದೆ 
" ಕನಸು ಭಾವ ಬಯಕೆ"
ಕಂಡ ಕಂಡಿದ್ದನ್ನೆಲ್ಲಾ 
ನನ್ನದಾಗಿಸಿಕೊಳ್ಳುವದರಲ್ಲಿಯೇ.....



                                            ನನಸಾದ ಕನಸು ನನ್ನದು .....
                                              ಚಂದ್ರಿಕಾ ಹೆಗಡೆ  

ಮಲೆನಾಡಿನ ಮಳೆಗಾಲದ ಆ ದಿನಗಳು


ದಿನಗಳು ವರ್ಷಗಳು ಕಳೆಯುತ್ತಲೇ ಇರುತ್ತವೆ . ನಿನ್ನೆಯ ನೆನಪುಗಳ ಜೊತೆ ಇಂದಿನ ಪರಿಸ್ಥಿತಿಯ   ಹೆಜ್ಜೆ ಹಾಕುವಾಗ ನಾಳೆಯ ಭರವಸೆಯೂ ಮುಂದಿರುತ್ತದೆ . ಹೀಗೆ ಕಳೆದ ದಿನಗಳ ಮೆಲುಕು ಇಲ್ಲೊಂದು ಘಳಿಗೆ ..........



ಮೂಲತಃ ಮಲೆನಾಡಿನವಳಾದ ನನಗೆ ಇನ್ನು ಹಚ್ಚ ಹಸಿರಾಗಿ ಮನದ ತುಂಬೆಲ್ಲ  ತುಂಬಿರುವ ಸಮಯ ಮಳೆಗಾಲದ್ದು.  ಪ್ಲಾಸ್ಟಿಕ್  ಕೊಪ್ಪೆ< ಪ್ಲಾಸ್ಟಿಕ್ ಹಾಳೆಗಳನ್ನು ಮಡಚಿ ಅದನ್ನು ಹೊಲಿಸಿ ಹಾಕಿಕೊಳ್ಳುತ್ತಿದ್ದೆವು.> ಸರಿಯಾಗಿ ರೇಡಿಯೋ ದಲ್ಲಿ  ಚಲನಚಿತ್ರ ಗೀತೆ ಮುಗಿದು , " ಆಕಾಶವಾಣಿ ಧಾರವಾಡ ,  ಇಲ್ಲಿಗೆ ಕನ್ನಡ ಚಿತ್ರಗೀತೆಗಳನ್ನು ಕೇಳಿದಿರಿ. ಇನ್ನು ಮುಂದೆ  ಸರಿಯಾಗಿ ೮ ಗಂಟೆಗೆ ಇಂಗ್ಲಿಷ  ಹಾಗು ಹಿಂದಿ ವಾರ್ತಾ ಪ್ರಸಾರ ದೆಹಲ್ಲಿ ಕೇಂದ್ರದಿಂದ " ಎಂದು ಹೇಳುತ್ತಿದ್ದಾಗ ಮನೆಯಿಂದ ಹೊರಡಲೇ  ಬೇಕು. ಅಪ್ಪನ ಜೊತೆಗೆ ಹೊರಡುತ್ತಿದ್ದೆವು. ನಾನು ಅಕ್ಕ ಪಕ್ಕದ ಮನೆಯ ಸುಜಾತಾ ಮಂಗಲ.... ಮನೆಗಳು  ದಾಟಿದ ಹಾಗೆ ಹುಡುಗರ ಸಂಖ್ಯೆಯು ಜಾಸ್ತಿ...
ಮಳೆಗಾಲದಲ್ಲಿ ಹೊಸ ಕೊಪ್ಪೆ ಹೊಲಿಸಿದರಂತು  ಲೆವೆಲ್ ಸ್ವಲ್ಪ ಜಾಸ್ತಿ!

ಮಳೆಗಾಲದ ದಿನಗಳಲಿ ಪ್ಲಾಸ್ಟಿಕ್ ಕೊಪ್ಪೆಯಲ್ಲಿ  ರಕ್ಷಿಸಿಕೊಂಡು , ತುಂಬಿದ ಹಳ್ಳಗಳನ್ನು ಭಯ - ವಿಸ್ಮಯಗಳಿಂದ ದಾಟುತ್ತಿದ್ದ ಆ ಕಾಲ  ಈಗ ಎಲ್ಲಿದೆ. ಇಂದು ವಾತಾವರಣ ವೈಪರೀತ್ಯಗಳಿಂದ ಮಳೆ ಯಾವಾಗ ಬೇಕಾದರೂ ಬರಬಹುದು!
 ನಾನು ಇನ್ನು ಬಾಲವಾಡಿಯಲ್ಲಿ ಕಲಿಯುತ್ತಿದ್ದೆ.< ಆವಾಗ ಕಲಿಯುವದಲ್ಲ  ಬಾಲವಾಡಿ ಅಂದ್ರೆ ಆಟ ಅಷ್ಟೇ. !> ಬೆಳ್ಳಿಗ್ಗೆ ೮ ಗಂಟೆಗೆ ನಾನು ಅಕ್ಕಂದಿರು ಪಕ್ಕದ ಮನೆಯ ಮಕ್ಕಳೂ  ಸೇರಿ ಹಳ್ಳ ದಾಟುತ್ತಿದ್ದೆವು. ನಾನು ಚಿಕ್ಕಂದಿನಿಂದಲೂ ಸಿಕ್ಕಾಪಟ್ಟೆ ತರ್ಲೆ. ಸರಿ ಎಲ್ರು ಹಳ್ಳ ದಾಟಿದರು ... ನಾನು ಪಕ್ಕದ ಮನೆಯ ಅನ್ನಪುರ್ಣಕ್ಕ ದಾಟಬೇಕಿತ್ತು.  ನಾನು ಹಾಗೆ ಆ ಜಾರಿಕೆಯ ಸಂಕದಲ್ಲಿ ಹೋಗುತ್ತಿದ್ದೆ  ಅಷ್ಟರಲ್ಲಿ  ಕ್ಷಣಾರ್ಧದಲ್ಲಿ ಜಾರಿ ಬಿದ್ದೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ! ಆ ವೇಳೆಗೆ ನನ್ನ ಚಿಂತೆ ನನ್ನ ಪಾಟಿ ಚೀಲ ಒದ್ದೆ ಆಗಿ ನನ್ನ ಹೊಸ ಮಗ್ಗಿ ಪುಸ್ತಕ ಹಾಳಾದರೆ! ಆ ವೇಳೆಗೆ ಅದೇನು  ವಿಚಾರ ನನ್ನಲ್ಲಿ ಬಂದಿತ್ತೋ ಇಂದಿಗೆ ನೆನಪಾಗುತ್ತಿಲ್ಲ .... ಅಲ್ಲಿರುವ ಚಿಕ್ಕ ಮಾವಿನ ಗಿಡವನ್ನು ಜೊತೆಗೆ ನನ್ನ ಕೊಪ್ಪೆ ಪಾಟಿಚೀಲವನ್ನು ಸೇರಿಸಿ ಆ ಗಿಡವನ್ನು ಗಟ್ಟಿ ಹಿಡಿದುಕೊಂಡೆ.  ಅಕ್ಕ ಚಂದ್ರಿ ಬಿದ್ದು ಹೋದಳು ಅಂತ ರಾಗ ಶುರು ಮಾಡಿದಳಂತೆ. ಅನ್ನಪುರ್ಣಕ್ಕ ಧೈರ್ಯ ಮಾಡಿ ಹಳ್ಳದಲ್ಲಿ ಇಳಿದು  ನನ್ನ ಎಳೆದುಕೊಂಡು ಬಂದು ಮಲಗಿಸಿದಳಂತೆ. ಅಷ್ಟೊತ್ತಿಗೆ ಅಪ್ಪ ಅಮ್ಮ ಬಂದು  ಉಲ್ಟಾ ಮಲಗಿಸಿ ನೀರೆನಾದ್ರೂ  ಕುಡಿದಿದ್ರೆ ಅಂತ ವಾಂತಿ ಮಾಡಿಸಿದರಂತೆ......
ಇಲ್ಲಿ ನಂಗೆ ನೆನಪಿರುವ ವಿಷಯ ನಾನು ಅಂದು ಹೊಸ ಅಂಗಿ ಹಾಕಿದ್ದೆ ...  ಅದು  ಡಾಟ್ ಡಾಟ್ ಇದ್ದ ಲೈಟ್ color ಅಂಗಿ....
 ಇಂದು ಆ ಮಾವಿನ ಗಿಡವೂ ಇಲ್ಲ.. ರಕ್ಷಿಸಿದ   ಆ ಅಕ್ಕನೂ ಇಲ್ಲ...

 ಛತ್ರಿ ಇದ್ದವರನ್ನ ನೋಡಿ  ಅವರೆಷ್ಟು ಶ್ರೀಮಂತರಪ್ಪ ಎಂದು ಅಂದುಕೊಳ್ಳುವ ಆ ದಿನಗಳಲಿ ಕಾಲಿಗೆ ಚಪ್ಪಲ್ಲಿನ ಅಗತ್ಯ ಇದೆ ಅಂತ ಅನ್ನಿಸಿರಲಿಲ್ಲ . ಈಗಿನ "high healed " ಮಾತೆಂತೂ ಎಲ್ಲಿ?  ಛತ್ರಿಯನ್ನು ಹಿಡಿದು ಕನ್ನಡ ಶಾಲೆಗೇ ಹೋದ ಮೊದಲ ದಿನ ನನ್ನನ್ನು ಹುಡುಕಿಕೊಂಡು ಬಂದ ಇನ್ನೊಂದು ಆಸೆ : ನಾವು ಈ ಛತ್ರಿಯನ್ನು ಕೈಯಲ್ಲಿ ಹಿಡಿಯದೆ ನಾವು ನಡೆದಂತೆಲ್ಲ ತನ್ನಷ್ಟಕ್ಕೆ ಆ ಛತ್ರಿ ತಾನಾಗಿ  follow  ಮಾಡಬೇಕಿತ್ತು.. !
ಮಳೆಗಾಲದ ದಿನಗಳಲ್ಲಿ ನಮ್ಮ ಶಾಲೆಯ ರೆಸ್ಟ್ ಟೈಮ್ ನ ದೇವರ ಪೂಜೆನೂ  ಬಂದ್ .

 ಈಗ ಬೆಂಗಳೂರಿನ ಮಳೆಗಾಲವನ್ನು ನೋಡುತ್ತಿದ್ದೇನೆ .... ಈಗಿನ ಮಕ್ಕಳು ನಿಜ ಮಳೆಗಾಲದ ಸುಖವನ್ನು ಕಾಣಲಾರದ ಬಗೆಗೆ ನನ್ನಲ್ಲಿ ವಿಷಾದವಿದೆ . ಅಷ್ಟೇ ಅಲ್ಲ ಕಾಲ ಬದಲಾದ ಹಾಗೆ ಆ ಆಟದ ಆಸಕ್ತಿಯ ದಿಕ್ಕು ಬದಲಾಗಿದೆ. ಪಾಲಕರ ಪಾಲನೆಯಲ್ಲೂ ವ್ಯತ್ಯಾಸವಾಗಿದೆ ..... ಮಳೆಯಲ್ಲಿ ನೆನೆದರೆ ಅಮ್ಮ ಮಾಡಿಕೊಡುವ ಕಷಾಯದ ಬದಲಾಗಿ crocin .... ಮೊದಲಾದ ಮಾತ್ರೆ ಕುಳಿತಿವೆ.  ಮಾಡಿಕೊಡುವ ಪುರುಸೊತ್ತು , ಸಾಮಗ್ರಿಗಳು ಮನೆಯ ಮುಂದಿನ ತೋಟದಲ್ಲಿ ಮಾಯವಾಗಿದೆ... ತೋಟವೂ.... ಮಕ್ಕಳೆಲ್ಲ ಬೆಂಗಳೂರಿನಲ್ಲಿ ಇದ್ದಾರೆ ಎಂದು ಅಪ್ಪ ಅಮ್ಮ ತೋಟವನ್ನು ಮಾರುತ್ತಿದ್ದಾರೆ.... ಇನ್ನೆಲ್ಲಿದೆ ಆ ದಿನಗಳ ನೆನಪು?  ಇನ್ನು ಎಂದಾದರು tour  ಎಂದು ಹೋದರೆ?... ನಮ್ಮ ಜಾಗಕ್ಕೆ....

ಕಿವಿಯಲ್ಲಿ... ಮನದಲ್ಲಿ... ಕಣ್ಣಲ್ಲಿ....ನೆನಪು ಮಾತ್ರಾ ಶಾಶ್ವತ.

                                                      ಇಂದಿಗೂ ಮಲೆನಾಡ ಮಗಳು ಎಂಬ ಹೆಮ್ಮೆಯಿಂದ..........
                               ಚಂದ್ರಿಕಾ ಹೆಗಡೆ

23 ಜನವರಿ 2011

ಜೀವನ ಮಾರ್ಗ

ಜೀವನ ಮಾರ್ಗ


ದಾರಿ ಸಾಗುತ್ತಲೇ ಇದೆ...
ನಡೆದಷ್ಟೂ ...
ನಡು  ನಡುವೆ ಕಂದರ ಪರ್ವತಾವಳಿ
ದಾಟಿದಷ್ಟೂ
ದಾರಿಗುಂಟ ನದಿ, ಕೆರೆ, ಹಳ್ಳ, ವಿಪರೀತ
ಅಂಬಿಗನಿಗೂ ಕೊರತೆ.
ನೆಚ್ಚಿಕೊಂಡು ಇದ್ದಷ್ಟೂ
ಸಮಸ್ಯೆಗಳಾ ಕಂತೆ!
ಸಾಧ್ಯವೇ ಇಲ್ಲ
ಇರುವಲ್ಲೇ  ಇದ್ದು ಕಾಲ ಕಳೆಯುವದು
ಇದ್ದರೂ , ಮರುಳೇ ಸರಿ!
ಸಾಗುತ್ತಲೇ - ಸಿಗುತ್ತಲೇ ಇರುತ್ತಾರೆ
ನಮ್ಮಂಥವರು. ಅವರಂಥವರೂ
ಮಧ್ಯೆ- ಮಧ್ಯೆ ಕಲಹ ಮನಸ್ತಾಪ
ಸಂಭ್ರಮ , ಉಲ್ಲಾಸಗಳ  ನಡುವೆಯೂ :
ಕೊಟ್ಟಷ್ಟೂ ಕಡಿಮೆ ಅವರಿವರಿಗೆ
ನೆಮ್ಮದಿ ಶಾಂತಿ ಕೇಳಬೇಡಿ
ಹೇಳಿಬಿಡಿ ಮತ್ತೊಮ್ಮೆ 'ಜಗತ್ತೇ ಹೀಗೆ'
ಇದಿರಿನಲ್ಲಿ ಮುಖದ ತುಂಬಾ ' ಮಂದ..  ಹಾಸ '
ಬೆನ್ನು ತಿರುಗಿಸಿದಾಗ 'ವ್ಯಂಗ್ಯ  - ಹಾಸ್ಯ '
ಬಿಟ್ಟು ಬಿಡಿ.. ಇಂಥವರನ್ನು
ಸಿಗುತ್ತಾರೆ.. ಒಮ್ಮೊಮ್ಮೆ
ಸ್ನೇಹ , ಪ್ರೀತಿ , ವಾತ್ಸಲ್ಯ ತಿಳಿದವರೂ
ಸೇರಿಬಿಡಿ- ಅವರಲ್ಲೊಂದಾಗಿ
ಹಾಸ , ಮಂದಹಾಸ, ಹಾಸ್ಯ...
ನಕ್ಕುಬಿಡಿ , ಹಿಂದಿನವರ ಮರೆತು
ದಾರಿ ಸಾಗುತ್ತಲೇ ಇದೆಯಲ್ಲ
ನೆನಪಿರಲಿ
ಮತ್ತೊಮ್ಮೆ ಸಿಗಬಹುದು ಹಿಂದಿನಂತವರೂ....
                                                              

 ಎಚ್ಚರಿಕೆಯಲ್ಲಿ....
ಚಂದ್ರಿಕಾ ಹೆಗಡೆ

ಪುಟ್ಟನ ಪರೀಕ್ಷೆ

                                                                 ಪುಟ್ಟನೊಂದು ಪುಸ್ತಕ ಹಿಡಿದು
                                                                  ಓದಲೆಂದು ಕುಳಿತನು
                                                                 ಅಯ್ಯೋ ! ಈಗ ಬಂದೆ ಎಂದು
                                                                 ಆಟಕೆಂದು ಎದ್ದನು .


                                                                 ಆಟವಾಡಿ ಸುಮ್ಮನೆಯೇ
                                                                ಓಡಿ ಬಂದು ಕುಳಿತನು
                                                               ಅಮ್ಮ ಎಂದ್ರೆ ಹೆದರಿಕೆಯೆಂದು
                                                               ಪುಸ್ತಕ ಹಿಡಿದು ಕುಳಿತನು.

                                                              ಕೈಯಲ್ಲಿರುವ ಪುಸ್ತಕ ಬಿಟ್ಟು
                                                              ಮೇಲೆ, ಕೆಳಗೆ ನೋಡಿದನು
                                                              ಅಯ್ಯೋ ದೇವರೇ ಪಾಸು ಮಾಡು
                                                              ಎಂದು ಮೊರೆಯಿಟ್ಟನು .

                                                              ಪರೀಕ್ಷೆ, ಪೆನ್ನು, ಹಾಳೆಯೆಂದು
                                                              ಅಮ್ಮಾ.. ಹಣ ಎಂದನು
                                                              ಚಿಲ್ರೆಯಿಲ್ಲದಿದ್ದರೆ ನೋಟು ಕೊಡು
                                                              ಎಂದು ಹೇಳಿ ಬಿಟ್ಟನು .

                                                              ಕೊಟ್ಟ ಹಣ ನೇರವಾಗಿ
                                                              ಅಂಗಡಿಗೆ ಹಾಕಿ ಬಿಟ್ಟನು
                                                              ಪೆನ್ನು ಇಲ್ಲ , ಹಾಳೆ ಇಲ್ಲ
                                                              ಚಾಕಲೆಟನ್ನೇ ತಿಂದನು.

                                                              ಶಾಲೆಯಲ್ಲಿ ಗುರುಗಳೆಲ್ಲ
                                                              ಪುಟ್ಟನನ್ನ ಬೈದರು
                                                             "ನೀನು ಪಾಸು ಆಗಿಯೇ ಇಲ್ಲ "
                                                             ಎಂದು ಸಾರಿ ಬಿಟ್ಟರು .

                                                              ಪುಟ್ಟ ನೊಂದುಕೊಂಡು
                                                            ಶಾಲೆಯಿಂದ ಬಂದನು
                                                            ಅಂದಿನಿಂದ ಓದಿನಲ್ಲಿ
                                                            ಲೀನವಾಗಿಬಿಟ್ಟನು .
                                                                                             ಪುಟ್ಟನ ಪ್ರೀತಿಯ
                                                                                             ಚಂದ್ರಿಕಾ ಹೆಗಡೆ

ಸಹಕಾರ

                                                      ನೀ ಪಡುವ ಪರಿಪಾಟಲಿಗೆ
                                                      ಶಕ್ತಿ ಮದ್ದು ನಾ ನೀಡಬಲ್ಲೆ
                                                      ಒಳಮೂಲೇಯಿಂದ  ನಿನ್ನ ಹೆಜ್ಜೆ
                                                       ಪಡಸಾಲೆಗಿಳಿದಾಗ......
                                                      ನದಿಮಧ್ಯ ಒಡೆದ ದೋಣಿಯ
                                                      ನಡೆಯಿಸಿ ತರಬಲ್ಲೆ ನಿಶ್ಚಿತ
                                                      ಭಯ , ಸ್ವಾರ್ಥಗಳನ್ನು
                                                      ಬಿಟ್ಟು ನೀ ಸಹಕರಿಸಿದಾಗ ....
                                                      ಮೋಡದ ಮರೆಯಲ್ಲಿ ಅವಿತಿರುವ
                                                      ಚಂದ್ರ ನಕ್ಷತ್ರವರೇಣ್ಯರ ಜಗ್ಗಿ ತರಬಲ್ಲೆ
                                                      ತರುವಲ್ಲಿ ತಡವಾದರೂ
                                                      ನೀ ಕಾಯುತ್ತೇನೆ ಎಂದಾಗ .....
                                                      ಜನ ಕೋಟಿ ಗಳೆಡೆಯಲ್ಲಿ ಯೂ
                                                      ಗುರುತಿಸಬಲ್ಲೆ ನಿನ್ನ:
                                                      ನೇರ ನಡೆ ನುಡಿಗಳ ಚಲನೆ
                                                       ಉಳಿಸಿಕೊಂಡಾಗ ........
                                                       ನಿನ್ನ ನಾದ ಮಾಧುರ್ಯತನವನ್ನು
                                                        ಸವಿಯಲೂ ತಿಳಿದಿದೆ : ಬಿಡು,
                                                       ಸಹಜವಾದ ಸಮ್ಮೋಹನದಿಂದ
                                                        ನೀ ಹಾಡಿದಾಗ .....
                                                        ಬರುವಾಗ ನೀ ತಂದ
                                                        ಬಯಕೆ, ಆಮಿಷಗಳ ಬೊಗಸೆಯಲ್ಲಿ
                                                       ಹಿಡಿದಿಡಲೂ ಬಲ್ಲೆ
                                                        ಕವನ ಕನ್ನಿಕೆಯಾಗಿ
                                                        ನನ್ನೆದುರು ನೀ ನಿಂತಾಗಲೇ !


21 ಜನವರಿ 2011

ಬೆನ್ಹತ್ತಿ ಬರುವ ಸಂಗತಿಗಳು ......

ಬೆನ್ಹತ್ತಿ ಬರುವ ಸಂಗತಿಗಳು

ನನಗೆ ನಮ್ಮೂರೇ ಚೆಂದ. ಆ ವಾತಾವರಣದ ಮುದ-ಹದ , ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ನೀವು ಗಿಜಿಗುಟ್ಟುವ ನಗರದವರೆ? ನಿಮಗೆಲ್ಲಿ ಅರ್ಥವಾಗಬೇಕಿದೆ ಇದೆಲ್ಲ? " ರಜದಲ್ಲಾದರೂ ಹಳ್ಳಿಯ ಮಜಾ ಪಡೆಯಿರಿ" ಎಂಬ ಫಲಕ ನಿಲ್ಲಿಸಲೇ? ನನಗಿಷ್ಟವಿಲ್ಲ ಅದೆಲ್ಲ! ನೀವು ನಮ್ಮೂರಿಗೆ ಬರುವಾಗ ನಿಮ್ಮೊಟ್ಟಿಗೆ ತರುವ ಪ್ಲಾಸ್ಟಿಕ್ ..  ರೆಡಿ ಟು eat ..... ಅದರ  ಉಳಿದ ಬಳಿದ .... ಕಸಗಳು.... ನಾವೆಲ್ಲಿಡಬೇಕು. ನಿಮ್ಮಲ್ಲಿರೋ ಹಾಗೆ  ನಮ್ಮೂರಲ್ಲಿ ಕಸದ ತೊಟ್ಟಿ ಇಲ್ಲ... ನಾವು ಇಂಥಹ ಕಸಗಳನ್ನು  ಸೃಷ್ಟಿಸುವದೆ  ಇಲ್ಲ.  ಅಂದ ಹಾಗೆ , ನೀವು ತರಕಾರಿ , ಎಲೆ , ಸೊಪ್ಪುಗಳನ್ನು " waste " ಎಂಬ ಫಲಕದ ಕೆಳಗೆ ಬಿಸ್ಸಾಕುತ್ತೀರಂತೆ!  ಕೇಳಿದ್ದು ನಾನು ಬೇಸರಿಸಬೇಡಿ ಹಾ.... ನಿಮಗೇನು ತಿಳಿದಿದೆ ನಮ್ಮ ಎಮ್ಮೆ ,ಆಕಳು ... ಇವುಗಳಿಗೆಲ್ಲ ಅವೆಂದರೆ ಪಂಚ ಪ್ರಾಣ! ..... ಊಊಉಯ್  ಆಕಳು ಎಮ್ಮೆ , ಎಂದ ಕೂಡಲೆ ಸೆಗಣಿ ವಾಸನೆ ಎಂದು ಮೂಗನ್ನೇಕೇ  ಮುಚ್ಚಿಕೊಂಡಿರಿ ? ನಮ್ಮ ಮನೆಯ ನೆಲವನ್ನು  ಅದರಿಂದಲೇ ಸ್ವಚ್ಚಗೊಳಿಸುವದು. ಆ ನೆಲದ ಮೇಲೆ ಕುಳಿತು ಒಂದು ಇಷ್ಟವಾದ ಹಾಡನ್ನು ಗುಂಗುನಿಸುವ ಅವಕಾಶ ನಿಮಗೆಲ್ಲಿದೆ? ನೀವು ಮೋಸಾಯ್ಯಿಕ್ ನೆಲದ ಮೇಲೆ ನಡೆದಾದ ಹೋಗಿ ಜಾರಿರುತ್ತೀರಿ.!
                  ಏನೋ... ಕೇಳಿದ ಹಾಗಿತ್ತಲ್ಲ ... ಅಲ್ಲೆಲ್ಲೋ ನೀರಿನ ಆಟವನ್ನು ನೋಡುತ್ತಿರಂತೆ?  ಪ್ಲಾಸ್ಟಿಕ್ ಬಂಡೆಗಳ ಮೇಲೆ ವಿದ್ಯುತ್ ಸಂಪರ್ಕದಿಂದ ನೀರು ಬೀಳುವದನ್ನು ... ನಿಮ್ಮ taste ಗೂ ನಿಮ್ಮ ಕಣ್ಣಿಗೂ ನಮಸ್ಕಾರ.. ಅದೇನು.. ಹಸಿರು ಕೆಂಪು ಪ್ಲಾಸ್ಟಿಕ್ ಹಾಳೆಗಳ ಮೇಲೆ  ಜಾರುತ್ತ  ಮಜಾ ಅನುಭವಿಸುತ್ತಿರೀ?  ಹೇ... ನಿಮ್ಮ ... ನಮ್ಮೂರಿನ ನದಿ ಹಳ್ಳ, ತೊರೆ,, ಝರಿ ...ನೋಡ ಬೇಕೂ ..... ಅಡಿಕೆ ಹಾಳೆಗಳ ಮೇಲೆ ಕುಳಿತು ಇಳಿಜಾರಿನಲ್ಲಿ ಜಾರುತ್ತ ಹೋಗಲೂ ಧೈರ್ಯ  ಬೇಕು. ಪುನರ್ಪುಳಿ ಎಲೆಗಳ ನಡುವೆ ಒಂಚೂರೂ ಉಪ್ಪು ಇಟ್ಟು ಸವಿಯಲು ಆ ಬಾಲ್ಯವೇ ಬರಬೇಕು. ಹಸಿ ತೆಂಗಿನ ಗರಿಯಲ್ಲಿ  " watch " ಮಾಡಿ ಕೊಡಲೂ ಅಂದಿನ ಸ್ನೇಹಿತರೇ ಬರಬೇಕು...
                                                                                 ನಮ್ಮುರಲ್ಲನ್ತೂ ಮಾತಿಲ್ಲ!  ಅದೇನೂ ಮಾತಿಲ್ಲದ ಊರು ಅದ್ಯಾವ ಊರು ? ವಿಚಿತ್ರಪಾ ಅಂತ ಹೇಳಿ ... ಭಯ ಬೀಳಬೇಡಿ.... . ಅಂದ್ರೆ ನಮ್ಮೂರಲ್ಲಿ ನೀವು ಈಗ ಮಾತಾಡ್ತಾ ಇದ್ದಿರಲ್ಲ ... ಕಿವಿ ಹತ್ರ ಅದೇನೋ ವಸ್ತು ಇಟ್ಟು < ಮೊಬೈಲ್ ಅಂತೆ> ,,, ಸುಮ್ಮ ಸುಮ್ಮನೆ  ನಗ್ತಾ , ನಾಚಿಕೊಳ್ತಾ, ಕೈ, ಬಾಯಿ , ಮಾಡ್ತಾ ಇರೋದು, ಇವೆಲ್ಲ ನಮ್ಮೂರಲ್ಲಿ ಇಲ್ಲಾ... ನಾವು  ಪಕ್ಕದ ಮನೆಯವರ ಹತ್ತಿರ ಮಾತನಾಡಬೇಕು ಅಂದ್ರೆ ಹೇ,,, ಹೋ... ಓಯ್,,, ಕೂಹೂ.. ಏ, ,,,, ಇವುಗಳನ್ನೇ,, ಬಳಸೋದು.  ಏನಂದ್ರೂ ನಮ್ಮೂರಲ್ಲಿ ಏಕಾಂತ ಇದೇರಿ. ನಿಮ್ಮೂರಲ್ಲಿ ಎಷ್ಟು ದುಡ್ಡು ಕೊಟ್ರು ಇದು ಸಿಗೊದಿಲ್ಲಂತೆ !. ಈಗ ನಿಮ್ಮೂರಿಗೆ ನಾನು ವಿಚಿತ್ರ ಊರು ಅಂತ ಹೇಳಬೇಕಾಯಿತು.
                          .............. ಏನೋ ತಮ್ಮೂರನ್ನು ಹೊಗಳಿಕೊಂಡು ಇದೆಲ್ಲ ಹೇಳ್ತಾ ಇದಾಳೆ ಅಂತ ಅಸಡ್ಡೆಯಿಂದ ಕೂಡ ಬೇಡಿ. ನಮ್ಮ ಹಳ್ಳಿ ನಿಮ್ಮೂರ < ಈಗ ಯಾರನ್ನು ಕೇಳಿದ್ರು ಬೆಂಗಳೂರು .....>ಹಾಗೆ ಆಗ್ತಾ ಇದೆ ಅನ್ನೋದು ನನ್ನ ಈ  ವಿಚಾರಕ್ಕೆ ಕಾರಣ .

                         ಇನ್ನೂ... ಇದೆ...
ಚಂದ್ರಿಕಾ ಹೆಗಡೆ

ಮತ್ತೆ ಬರುವದೇ ಬಾಲ್ಯ?

ನನ್ನ ಮನಸ್ಸಿನಲ್ಲಿ ಯಾವಾಗಲೂ ಮತ್ತೆ ಮತ್ತೆ  ಕಾಡುವ ನೆನಪೆಂದರೆ  ನನ್ನ ಬಾಲ್ಯದ ಆ ದಿನಗಳು . ಅರ್ಥವಾಗುವ ಸಮಯಕ್ಕೆ  ಕಳೆದು ಕೊಳ್ಳುವ  ಘಳಿಗೆ !     ಮಕ್ಕಿ ಗೆದ್ದೆಯಲ್ಲೋ..... ಕಳ....<ಬತ್ತ ಮಾಡುವ ಜಾಗ> ದಲ್ಲೋ... ಗುಡ್ನ < ದೀಪವನ್ನು ಇಡಲು ಇರುವ ಸ್ತಂಭ >  ಮಗನೂ.. ಮಗಳೂ.. ಆಗಿ... ನಮ್ಮ .....ಮಡಿಲುಗಳನ್ನ ತುಂಬಿತ್ತು...  ಪಕ್ಕದ ಮನೆಯ ಯಾವುದಾದರೂ ಗಂಡು ಹುಡುಗ  ವಯಸ್ಸು... ಜಾತಿ... ಬಣ್ಣ.... ತಾರತಮ್ಯ ಇಲ್ಲದೇ  ಮದುವೆಯ  ಸಂಭ್ರಮವೂ  ಕಳೆಯುತ್ತಿತ್ತು... ಅಲ್ಲಿ ಯಾರಾದರೂ ದೊಡ್ಡವರು ಬಂದ್ರೆ ಹೀ ಬನ್ನಿ ಬನ್ನಿ ಸ್ವಾಗತ ಬೇರೆ!..... ಊಟ ಅದೇ ಹುಳಿಸೆ ಹಣ್ಣು... ಶೇಂಗ... 

ಹುಡುಗಿಯರ ಗೊಂಬೆಯಾಟದ ಸಮಯ ಮತ್ತೆ ಬಂದಿದೆ .... ನನ್ನ ಜೊತೆಗೆ ಆಡಿದ ಹುಡುಗಿಯರೆಲ್ಲ  ಜೀವಂತ ಗೊಂಬೆಗಳ ಜೊತೆ ಆಡುವ ಸಮಯ ಇದು .....ನಾನು ಕೂಡ.....
ಕಳೆದ ಸಮಯದ ಸ್ವರ .... ಇಂದಿನದು.

ಇನ್ನು ಶಾಲೆಯ ವಿಷಯ... ಶಾಲೆಯಲ್ಲಿ.. rest  ವೇಳೆಯಲ್ಲಿ... ದೇವರ ಪೂಜೆ... ಪೂಜೆಗೆಂದು ಮನೆಯಿಂದ ಪಾಳಿ ಪ್ರಕಾರ  ಹೂವು  ನೆವೆದ್ಯಕ್ಕೆ  ತಿಂಡಿ < ಅದೂ ಹುಳಿಸೆ ಹಣ್ಣು .... ನೆಲ್ಲಿ ಕಾಯಿ ... ವಗೈರೆ... > ತರುವದು... ಪೂಜೆಗಾಗಿ.. ನನ್ನ ಗೆಳತಿ ನಾಗರತ್ನ ಮನೆಯಿಂದ WELCOME  ಎನ್ನುವ ಒಂದು WALL ಪೀಸ್  ತಂದಿದ್ದಳು. ಅದು ಒಂದು ಸಲ ನಮ್ಮ  ಗುರೂಜಿಗೆ ಗೊತ್ತಾಗಿ ತಮ್ಮ ಮನೆಗೆ ತೆಗೆದುಕೊಂಡು  ಹೋದರು.< ಅವ್ರ ಮನೆಗೆ ಯಾಕೆ? ಗೊತ್ತಿಲ್ಲ!>..... ಇವತ್ತಿಗೂ ಮನೆಯಲ್ಲಿ ಪೂಜೆ ನಡೆಯುತ್ತಿದೆ ಅದೇ ಭಕ್ತಿ.. ವಿಗ್ರಹ ... ನೇವೇದ್ಯ ಬೇರೆ ..... ಅಸ್ಟೆ......
............ ಇನ್ನು ಆಮೇಲೆ ಹೇಳ್ತೀನಿ.....  ನೆನಪಿನ  ಬುಟ್ಟಿಗೆ  ಕೈ  ಹಾಕ್ತೀನಿ.....
                                                                                             ಚಂದ್ರಿಕಾ ಹೆಗಡೆ