ಸ್ಲೈಡ್‌ಶೋ

Loading...

15 January 2012

ಎಲ್ಲರಿಗೂ ಸಂಕ್ರಮಣದ ಶುಭಾಶಯಗಳು ....

ಎಳ್ಳು ಬೆಲ್ಲದ ಸವಿ ಎಲ್ಲರ ಜೀವನದ ಪ್ರತಿ ಸಮಯವಾಗಲಿ...
ಸರ್ವ ಹಿತ ಬಯಸುವ ಮನಸು ಎಲ್ಲರಲ್ಲಿ
ಮೂಡಿ ಬರಲಿ...
ತಾವು ಸಿಹಿ ತಿಂದು ಇನ್ನೊಬ್ಬರಿಗೆ ಸಿಹಿ ಹಂಚುವ ಇಂದಿನ ಮನಸ್ಸು ಮುಂದಿನ ದಿನಗಳಲ್ಲೂ ಇದ್ದರೆ ಜಗವೆಸ್ಟು ಸುಂದರ!
ವಾತಾವರಣ ವನ್ನು   ನೋಡಿ ಹಬ್ಬ- ತಿನಿಸು- ಆಚರಣ ಕ್ರಮ ಅನುಸರಿಸುತ್ತ ಇದ್ದ ಅಂದಿನ ಹಿಂದಿನ ಜನ ಅದೆಷ್ಟು ಬುದ್ಧಿವಂತರಾಗಿದ್ದರು...
ಒಂದೊಂದು ಕಾಲಕ್ಕೆ ಇಂತಿಂಥ ತಿನಿಸು ಎಂದು ಪದ್ಧತಿಯ ಪರಿಕ್ರಮ ಅದೆಷ್ಟು  ಅರ್ಥಪೂರ್ಣ...

ಇಂಥದ್ದೇ ಹಲವು ವಿಚಾರ ನಿಮ್ಮನ್ನು ಕಾಡಿರಲೇ ಬೇಕು.....


ಚಿಂತನೆಯ ಜಾಡು...ಹಿಡಿದು


ಚಂದ್ರಿಕಾ ಹೆಗಡೆ

03 January 2012

ಪ್ರೀತಿಯ ತಾಯಂದರಿಗೊಂದು ಆತ್ಮೀಯ ಮಾತು

ಗೆಳತಿಯರೆ,
                 ಮನೆಗೊಂದು/ ಮನಕ್ಕೊಂದು ಮುದ್ದಾದ  ಮಗು ಬಂದಿದೆಯೆಂದರೆ ಸಂಭ್ರಮಿಸಿ. ಆ ಮಗುವಿಗೆ ಆತ್ಮೀಯ ಸ್ವಾಗತ ನೀಡಿ. ನಿಮ್ಮ ಬೆಚ್ಚನೆಯ ಸ್ಪರ್ಶಕ್ಕೆ ಹಸುಗೂಸು/ ಮಗು ಅಳು ನಿಲ್ಲಿಸಿ ನಗು ಸೂಸಲಿ. ನಿಮ್ಮ ಆತ್ಮೀಯರಿಗೋ/ ಪರಿಚಯದವರಿಗೋ/ ನಾದಿನಿ- ಅತ್ತಿಗೆ.... ಸಂಬಂಧಿಕರಲೋ ಇದೇ ಖುಷಿ ವಿಚಾರವಿದೆಯೆಂದರೂ ನಿಮ್ಮ ಮಗುವಿನ ಸಂಭ್ರಮವನ್ನೇ ಆಚರಿಸಿ. ಸ್ವಾಗತಿಸಿ- ಪ್ರೀತಿಸಿ. ಬಣ್ಣದ ಹೋಲಿಕೆ, ಅಂತಸ್ತಿನ ಪ್ರಶ್ನೆ, ತೂಕ- ದಪ್ಪ- ಗುಂಡು ಗುಂಡಾಗಿದೆ...... ಹೋಲಿಕೆ ಬಿಟ್ಟು ಬಿಡಿ. ಆರೋಗ್ಯಕ್ಕೆ ಮಹತ್ವ ನೀಡಿ. ಜಗತ್ತಿಗೊಂದು ಹೊಸ ತಲೆಮಾರಿನ ಆಗಮನವಾಗುತ್ತಿದೆ.... ಮುಗ್ಧ ಮನಸು ಜನಿತವಾಗಿದೆ. ಅದಕ್ಕೊಂದು ಒಳ್ಳೆ ಜೊತೆ/ ಗೆಳತಿ/ ಪಾಲಕಿ....ನೀವೇ....!

                                                                         ಅದರಲ್ಲೂ ಮಗುವಿನ ಎದುರಲ್ಲಿ ಅವಳು/ಅವನ ಬಣ್ಣ ನೋಡು....!ಶೈಲಿ ನೋಡು..... ಹೋಲಿಕೆಯೆಂಬ ಚಟ....ನಿಲ್ಲಿಸಿ. ಹೋಲಿಕೆ ಇದ್ದರೂ ನಿಮ್ಮ ಮಗುವಿನ ಎದುರು ಬೇಡ...ಮಗು ಉತ್ತಮ ನಾಗರಿಕನಾಗಲು ಇವೆಲ್ಲ ಅರ್ಹತೆಯಲ್ಲ....!
ತಾಯಿಗೆ" ಅಳುವ ಕಂದನ ತುಟಿ  ಹವಳದ ಹಾಗೆ "ಕಂಡಿದ್ದು  ಇಂದಿಗಲ್ಲ.... ಅಂದಿನಿಂದ  ಮುಂದಿನವರೆಗೂ ....ಅಮ್ಮನ ಕೈ ಬೆರಳು ಸೋಕಿದರೂ ಸಾಕು ಪುಟಾಣಿಯ ಮುಖದಲ್ಲಿ  ಖಿಲಾಡಿ ನಗು ಮೂಡಲು.
ಜಗದ ಪರಿಯ ಬಗೆಗೆ ತಲೆ ಕೆಡಿಸಿಕೊಳ್ಳಬೇಡಿ. ಮಗು ನಿಮ್ಮದಾಗಿರಲಿ...ಆರಂಭದಿಂದಲೇ ಅದರ ಬೌದ್ಧಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ತಿಸಿ. ಕಲಿಕೆಯಲ್ಲಿ ಎಲ್ಲಾ ಮಕ್ಕಳು  ಮೊದಲನೇ ಸ್ಥಾನದಲ್ಲಿ ನಿಲ್ಲಬೇಕೆಂಬ ಜರೂರತ್ತು/ ನಿಯಮ ಎಲ್ಲೂ ಇಲ್ಲ.
ಬದುಕುವ ಕಲೆ, ಸ್ವಂತ ಆಲೋಚಿಸುವ ಗುಣ, ಸ್ವಚ್ಚತೆ, ವಯಸ್ಸಿಗೆ ಬಂದ ಮೇಲೆ ಜವಾಬ್ದಾರಿಯುತ ಪ್ರಜೆಯಾಗುವ  ಅರ್ಹತೆ .... ತಿಳಿಸಿ. ಪ್ರೇರೇಪಿಸಿ. ಆಟದ ಮೂಲಕ   ಪಾಠ  ನಿರ್ವಹಿಸುವ ಜವಾಬ್ದಾರಿಯಲ್ಲಿ ಒಂದಿಷ್ಟು ಅಮ್ಮಂದಿರ ಪಾಲಿದೆ ತಾನೇ...?

                           ಮಗುವಲ್ಲಿ ಮಗುವಾಗಿ ಗೆಳತಿಯರೆ,  ಜಗದ ಜಂಜಡ ವೆಲ್ಲ  ಕ್ಷಣಾರ್ಧದಲ್ಲಿ ಮಾಯ!

ಸದ್ಭಾವದಿಂದ... ಅಮ್ಮನಾಗಿ.....

ಚಂದ್ರಿಕಾ ಹೆಗಡೆ

31 December 2011

ಕಳೆದ ವರುಷ ...ನೆನಪು... ಮಾತ್ರ...

ನೆನಪಿನ ರಾಶಿಗೆ...ಇನ್ನೊಂದು ವರುಷ ಸೇರಿದೆ. ಹಲವು ಬೆಳವಣಿಗೆಯಲ್ಲಿ, ಮನ ಈ ವರ್ಷ ನೀನು ಅಂದುಕೊಂಡ ಕೆಲಸವೆಲ್ಲ  ಯಶಸ್ವಿಯಾಗಿ  ಮುಗಿಸಿದ್ದಿಯಾ... ಎಂದು ಪ್ರಶ್ನಿಸಿದರೆ ಎಂಬ ಅಂಜಿಕೆಯಿಂದ ... ನಾನೇ.. ಸ್ವಲ್ಪ ಸಾಧ್ಯವಾಯಿತು  ಕ್ಷಮಿಸು ಮನವೇ ನಿನ್ನ ಸಹಕಾರದಿಂದ ಇದೆಲಾ ಸಾಧ್ಯ... ಖಂಡಿತ ಈ ವರ್ಷ ನಾನು ಅಂದುಕೊಳ್ಳುವ ಕೆಲಸದ ಜೊತೆ ಹಳೆ ಬಾಕಿ ತೀರಿಸಿಕೊಳ್ಳುತ್ತೇನೆ ಎಂಬ ಆತ್ಮೀಯ ನಿರ್ಧಾರಾತ್ಮಕ ಭರವಸೆ ನೀಡಿದ್ದೇನೆ.

ನನಗಂತೂ ೨೦೧೧ ಖುಷಿ ವರ್ಷವೇ ಆಗಿತ್ತು. ಖುಷಿಯಾಗದ ಕ್ಷಣವನ್ನು ಹೇಳುವದಿಲ್ಲ.... ಅದಕ್ಕೆಲ್ಲ ಉತ್ತರ... ಪರಿಹಾರದತ್ತ  ನನ್ನ ಚಿತ್ತ... ಅನೇಕರ ಸಹಕಾರ ಪಡೆದಿದ್ದೇನೆ. ಅವರಿಗೆಲ್ಲ ಧನ್ಯವಾದದೊಂದಿಗೆ.... ಹೀಗೆ ಸಹಕಾರ... ಪ್ರೀತಿ... ಮುಂದುವರೆಸಿ...ಹರಸಿ ಎನ್ನುವೆ.

ಭವಿಷ್ಯವನ್ನು  ಟೀವಿ ಪರದೆಯ  ಮೇಲೆ ತುಂಬಿ ಭವಿಷ್ಯವನ್ನು ಹೇಳುತ್ತಿರುವ ಜ್ಯೋತಿಷ್ಯಿಗಳನ್ನು / ಅವರ ಮಾತನ್ನು  ಕೇಳಿ ಒಮ್ಮೆ ಬೆಚ್ಚಿದ್ದರೂ ಟೀವಿ  ಚಾನಲ್ ಬೇರೆ ಮಾಡಿ ಇಟ್ಟಿದ್ದೇನೆ.

ಖಂಡಿತ ಕೇಕ್ ತರದೇ ನಾನೇ ಪ್ರೀತಿಯಿಂದ ಹೊಸ  ನಾಳೆಗೆಂದು ಸಿಹಿ ಮಾಡಿದ್ದೇನೆ. ರುಚಿ ಮಾಡಿಯಾಗಿದೆ. ತುಂಬಾ ಚೆನ್ನಾಗಿದೆ.  ಅದನ್ನೂ ನನ್ನ ಅಡುಗೆ ಬ್ಲಾಗ್  ಮನೆಯ ಶಕ್ತಿ ... ಯಲ್ಲಿ ಹಾಕುವೆ.
ಹೊಸ  ವರ್ಷಕ್ಕೆ .... ಇನ್ನೂ ಹರ್ಷಕ್ಕೆ ಕಾಯುತ್ತಿರುವೆ.....
ನಿಮ್ಮೆಲ್ಲರ....ಖುಷಿ ಜಾಸ್ತಿಯಾಗಲಿ....
2012

ಚಂದ್ರಿಕಾ ಹೆಗಡೆ

26 October 2011

ಬ್ಲಾಗನ್ನೇ ಮರೆತೆಯಾ...

ಬ್ಲಾಗನ್ನೇ ಮರೆತೆಯಾ... 
ಎಂದು ನನ್ನನ್ನೇ ನಾನು ಕೇಳಿ ಕೊಂಡು ಸೋತು... ದೀಪಾವಳಿ ಗೆ ಆದರೂ  "ನಾಲ್ಕು ಸಾಲು ಬರೆದೆ ತೀರುತ್ತೇನೆ"  ಎಂಬ  ತೀರ್ಮಾನಕ್ಕೆ ಬಂದು ಮುದ್ದು ಕಂದನನ್ನು ಅವನ ಅಬ್ಬೆಯ  ಹತ್ತಿರ ಬಿಟ್ಟು ,  ಡಾಕ್ತ್ರ ತ್ರ ಹೋಗಿ ಬರ್ತೀನಿ  ಎಂಬ ಅಮ್ಮಂದಿರ ಸಾರ್ವಕಾಲಿಕ ಸುಳ್ಳಿನ ಬೀಜವನ್ನು  ಅವನ ಮುಂದೆ ಇಟ್ಟು.... ಸುಮ್ಮನೆ ಅಡಗಿ ಕುಳಿತು ಬರೆಯುತ್ತಿದ್ದೇನೆ....ಮಗನ ಹತ್ರ ಮನದಲ್ಲೇ ಕ್ಷಮೆ ಕೇಳಿ...
ಮಗನ ಖಿಲಾಡಿ, ನನ್ನ  ಮನಸನ್ನು ಹಿಡಿದು(ಬಡಿದು!) ...ಒಮ್ಮೊಮ್ಮೆ ಜಾಸ್ತಿಯಾಯ್ತೆನೂ.. ಅಂತ ಇರುವ ಪ್ರೀತಿಯ ಫ್ರೆಂಡ್ಸ್ ಗೆ ಫೋನಾಯಿಸಿ  ನಿನ್ನ ಮಗನು ಹೀಗೆ ಮಾಡ್ತಾನ... ಮಾಡ್ತಿಡ್ನ,,,ಭೂತ... ವರ್ತಮಾನವನ್ನು ಕೇಳಿ.. ನನ್ನ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇನೆ. ಪ್ರಶ್ನೆ ಕೇಳಿ ತಲೆ ತಿನ್ನಬೇಡ...ಅಂತ ಬಯ್ಯುತ್ತಲೇ  ಮನದಲ್ಲೇ  "ಆಯ್ತೆನು ಪ್ರಶ್ನೆ ಕೇಳಿ, ಇನ್ನೊಂದಿಸ್ಟು ಕೇಳೋ...." ಮುಂದುವರೆಯುತ್ತಿದೆ. 



.................ಏನೇನೋ ಬರವಣಿಗೆ... ಓದು... ಕೆಲಸ... ಬಿದ್ದಿದ್ದ ಮನಸನ್ನು ಇನ್ನಾದರೂ ಕೊಡವಿ  ಬರೋಣ ಎಂದರೆ ... ಇನ್ನು ಮತ್ತೆ ೧೫ ದಿನ ಬಹು ಮುಖ್ಯ ಕೆಲಸ!.. ಸ್ನೇಹಿತರ ಬ್ಲಾಗ್ ನೋಡದೆ ಅದೆಸ್ಟು ದಿನ ಆಯಿತೋ





ಮತ್ತೊಂದು ವಿಷಯ ಸ್ನೇಹಿತರೆ.... ಅದೊಂದು ದಿನ ನಾನು ಹೀಗೆ ಒಬ್ಬರ ಹತ್ತಿರ ಮಾತನಾಡುತಿದ್ದಾಗ . ಇಂಟರ್ನೆಟ್ ಒಂದು ಚಟ - ಅದನ್ನ ಬಿಡಕ್ಕೆ ಆಗಲ್ಲ .... ಒಮ್ಮೆ  ಬಿಟ್ ನೋಡಿ ಹಾಗಾದ್ರೆ ಅಂತಾ  ಹೇಳಿದ್ರು... ಅವರ ಮಾತಿಗೂ ಒಂದು ಬೆಲೆ ಕೊಟ್ಟು ನೋಡಿದೆ  ನನಗೇನು ಚಟದ ಹಾಗೆ ಅನ್ನಿಸ್ತ ಇಲ್ಲ...ಅಂತ ಈಗ ಹೇಳಿ ಬಿಟ್ಟೆ ...

ನಿಮ್ಮ ಅನಿಸಿಕೆ.....ನನ್ನ ನಿರೀಕ್ಷೆ....!

ಮನದ ಚಿತ್ತಾರ.... ಬಣ್ಣ ಹಲವು... !

ಚಂದ್ರಿಕಾ ಹೆಗಡೆ






12 April 2011

ಕಳೆದ ಬೇಸಿಗೆ ರಜಾ.....



ಅಮೋಘವಾದ ಬಾಲ್ಯವನ್ನು ಅತ್ಯದ್ಭುತವಾಗಿ ಕಳೆದಿದ್ದೇವೆ.
ಮಳೆಗಾಲದಲ್ಲಿ ಆರಂಭಗೊಂಡ ಶಾಲಾ ಕ್ರಿಯೆ- ಕರ್ಮ ಮಾರ್ಚ್ ವೇಳೆ ಮುಗಿಯುವ ಹಂತ. ಮಧ್ಯದಲ್ಲಿ ಅಕ್ಟೋಬರ್  ರಜಾ... ಇದರಲ್ಲಿ ....ತೋಟದಲ್ಲಿ ಇದ್ದಷ್ಟು ಗೆಂಟಿಗೆ ಹೂಗಳನ್ನು ಹೊರಲಾಗದೆ ಬಾಗಿ ಹೋದ ಜಡೆಗಳಲ್ಲಿ ನೇಲಾಡಿಸಿಯೋ... ಇಲ್ಲ ದಂಡೆಯ ಹಣೆದು ಗಂಭಿರವಾಗಿ ಇದ್ದ ಮುಡಿಗಳಲ್ಲಿಯೋ ಬಿಗಿ ಬೊಂದೊವಸ್ತು ಮಾಡಿ... ಹೂವು ಹಳೆಯ ವಾಸನೆ ಬರುವ ವರೆಗೂ ಮುಡಿದಿದ್ದೇವೆ ಎಂಬುದನ್ನು ಮರೆತು...ಇನ್ನೊಬ್ಬರ ತಲೆಯ ಮೇಲೆ  ಕಣ್ಣಿರಿಸಿ  ಬಣ್ಣಕ್ಕೆ ಮಾರುಹೊಗುತ್ತಿದ್ದ ಸಮಯ ಈಗ ಕೈನಲ್ಲಿ ಇಲ್ಲ!ಕೋಕೋ ಹಣ್ಣನ್ನು ತಿಂದು ವ್ಯಾಕ್ ಎಂದವರು, ಚಪ್ಪರಿಸಿದವರು,  ಚಿನ್ನಿದಾಂಡು ಆಡುವಾಗ ಕೆರೆಯಲ್ಲಿ ಬಿದ್ದು ಸದ್ದಿಲ್ಲದೇ ಮೈಯ ತೊಳೆದು ಕೊಂಡವರು, ಮಾವಿನ ಕಾಯಿ ಕೊಯ್ದು ಕೊಟ್ಟವನಿಗೆ ಪಂಗನಾಮ ಹಾಕಿ  ಟಾಟಾ ಅಂದವರು.. ಪಾಸಾಗಿ ನಾನು ಫಸ್ಟ್   ಎಂದು ಬೇರೆ ಕಡೆಯಿಂದ ಬಂದ ನಮಗೆ ಸುಳ್ಳನ್ನು ಹೇಳಿ ಎಸ.ಎಸ.ಎಲ್.ಸಿ ಯಲ್ಲಿ ಡುಮ್ಕಿ ಹೊಡೆದವರು.. ಭಟ್ಟರ ಮನೆಯ ಮೊಗೆ ಬಳ್ಳಿಯನ್ನು ಸದ್ದಿಲ್ಲದೇ ನಾಪತ್ತೆ ಮಾಡಿ.. ಸೈ ಎನ್ನಿಸಿಕೊಂಡ ಧೀಮಂತರು! ಸಗಣಿಯನ್ನು  ತಿಂದು "ಭರ್ಜರಿ ಮಾಣಿ" ಎಂಬ ಪಟ್ಟ ತಾನೇ ಕಟ್ಟಿ ಕೊಂಡವನು, ಕಣ್ಣ ಮುಚ್ಚಾಲೆ ಆಡಲು ಹೋಗಿ ಅಡಗಿ ಕೊಂಡು ಅಲ್ಲೇ ನಿದ್ದೆ ಮಾಡಿ, ಮನೆಯವರಿಂದ ಉಗಿಸಿ ಕೊಂಡವರು, ಇವರೆಲ್ಲ ಜಗತ್ತಿನ ಯಾವುದೋ ಭಾಗಕ್ಕೆ ಏನನ್ನೋ ಹುಡುಕಿ ಹೋಗಿದ್ದಾರೆ. ಗೆಂಟಿಗೆ ಕಾಲ ಮುಗಿದು ಚಳಿಗಾಲ ಕಳೆದು ಪರೀಕ್ಷೆಯ ಫಲಿತಾಂಶ  ನಿರ್ಧಾರಿತ ದಿನಾಂಕ ನಿನ್ನೆ ಮೊನ್ನೆ ಆಗಿದೆ ಮುಗಿದಿದೆ. ೧೦೦ ಕ್ಕೆ ೧೦೦ ಪಾಸು ಅಂತ ಗೊತ್ತಿದ್ದೂ ತಿರಗ ಬರುವಾಗ ನಾನು ಪಾಸು ಎಂದು ಸಂತೋಷ ಪಡುವ ಗೆಳೆಯರು , ಶಾಲೆಯ ಎದುರಿಗೆ ಒಂದು ಕಲ್ಲು ಒದೆಯುತ್ತ , ಎಷ್ಟೋ ಕಿಲೋಮೀಟರು ಆ ಕಲ್ಲನ್ನೇ ಗುರಿಯಾಗಿಸಿ ಮನೆ ತಲುಪುವ ಘಳಿಗೆ .... ಒಂದು ಸಲ ನಿಮಗೂ ಅನ್ನಿಸುವದಿಲ್ಲವೇ ...? ನಮ್ಮ ಕೈ ತಪ್ಪಿದ ಸಮಯ ಎಂದು?
ಯಾಕಾದರೂ ಶಾಲೆ ಮುಗಿಯಿತೋ? ನಾವಿಲ್ಲದೇ ಆ ಗೇರು ಮರ, ಸಂಪಿಗೆ ಮರಗಳು ಎಷ್ಟು ಅನಾಥ ಪ್ರಜ್ಞೆಯಿಂದ ನರಳುತ್ತವೋ ... ಎಂಬ ಭಾವ ಅಂದಿನ ಶಾಲಾ ಸಮಯದವು. ಹಸಿ ಗೇರು   ಬೀಜದ ಮೂತಿಯನ್ನು  ಉಜ್ಜಿ ಉಜ್ಜಿ  ಜೋರಾಗಿ ಕಾಲಲ್ಲಿ ಒತ್ತಿ ದಾಗ  ಪಿಚ್ ಎಂದು ಹೊರಗೆ ಬರುವ ಹುಂಗಿನಲ್ಲಿ ಅದೇನು ರುಚಿ! ಗೇರು ಬೀಜದ ಕಲೆಯಾಗ ಬಾರದು ಎಂದು ಗೇರು ಹಣ್ಣಿನ ರಸದಲ್ಲಿ ತಿಕ್ಕಬೇಕೆನ್ನುವ ಸಂಶೋಧನೆಯ  ಹಕ್ಕು ಸ್ವಾಮ್ಯ ಯಾರದೋ ಬಲ್ಲವರು ಯಾರು.. ಅದಕ್ಕಾಗಿ ಜಗಳವೂ ಇಲ್ಲವಲ್ಲ!
ಗೇರು ಹಣ್ಣಿನ ಮೇಲೆ ಉಪ್ಪನ್ನು ಸವರಿ... ಆಹಾ... ಅದೇನು ಅದ್ಭುತ ಸವಿ...

........................
ಎಷ್ಟು ಬೇಗ ಕಳೆಯಿತು ಸುಂದರ ಬಾಲ್ಯ... ಅಜ್ಜನ ಮನೆಗೆ ೨-೩ ವರ್ಷಕ್ಕೆ ಒಮ್ಮೆ ಹೋಗುವ ಘಳಿಗೆ ಈಗ ವರ್ಷಕ್ಕೆ ಒಮ್ಮೆ ಬಂದರು ಆ ಮಜಾ ಸಿಗುತ್ತಿಲ್ಲ. ಆಗಿನ ಒಂದು ಎರಡು ಹೊಸ ಅಂಗಿ ಇಂದು ಕಬಾರ್ಡಿನ ತುಂಬೆಲ್ಲ ಇರುವ  ರೇಷ್ಮೆಯ ಯಾವ ಡ್ರೆಸ್   ಅದಕ್ಕೆ ಸಮ ಅಲ್ಲ. ಅಂದಿನ ಹವಾಯಿ ಚಪ್ಪಲ್ಲಿಗೆ ಇಂದಿನ ಯಾವುದೇ ಹೈ ಹೀಲ್ಡ್  ಸರಿ ಸಾಟಿ ಅಲ್ಲವೇ ಅಲ್ಲ. ಕೇರಳ ಕ್ಕೆಂದು( ಅಜ್ಜನ ಮನೆ) ಹೋಗುವಾಗ ಸಂಭ್ರಮಿಸುವ ರೀತಿ ,ಬರುವಾಗಿನ ಬೇಸರ... ಇಂದು ಮಾಮೂಲು. ಭಾವನೆ ಚಿಕ್ಕದಾಗಿದೆ!
ಹೀಗೆಲ್ಲ ನೆನಪಾಗಿದ್ದು ಮಾವ " ಯಾವಾಗ ಅಜ್ಜನ ಮನೆಗೆ  ಬಪ್ಪದು"  ಎಂದು ಕರೆ ಮಾಡಿದಾಗ. ಪ್ರೀತಿಯ ಅಜ್ಜಿಗೆ ವಯಸ್ಸು ಆಗಿ, ಕೂಗಿ ಹೇಳಬೇಕು. ಮಾವನಿಗೆ ತನ್ನ ಮಗನ ಮಗಳ ವಿದ್ಯಾಭ್ಯಾಸ , ಭವಿಷ್ಯದ ಚಿಂತೆ, ಅತ್ತೆಗೆ ಸಂಸಾರ...ಜವಾಬ್ದಾರಿ... ನಡುವೆ ನಮ್ಮನ್ನು ಪ್ರೀತಿಯಿಂದ  ಕರೆಯುವ ಪರಿಗೆ ಓ ಅಂದು ಹೊರಟಿದ್ದೇವೆ. " ಒಂದೆರಡು ದಿನ ಇರೆಕ್ಕು... "ಪಾಲ್ ಪಾಯಸ " ಮಾಡುತ್ತೇನೆ ಎಂದ ಮಾವನಿಗೆ ಹುಂ ಅಂದಿದ್ದೇನೆ. ಉದಯ್ ನ ನಿರಂತರ ಕೆಲಸಕ್ಕೆ ಸ್ವಲ್ಪ ವಿರಾಮ ..ಅವನು ಉಮೇದಿನಿಂದ ಹೊರಟಿದ್ದಾನೆ...ಟಾಟಾ ಹೋಗುವದಿದ್ದು ಎಂದಾಗಲೆಲ್ಲ ಊಟ  ಸರಿಯಾಗಿ ಮಾಡುವ ಮಗ, ಮುಂದಿನ ವಾರದ ಕೆಲಸವನ್ನೆಲ್ಲಾ ಮೊದಲೇ ಮುಗಿಸ ಬೇಕೆಂದು ಯೋಜನೆಯಲ್ಲಿ ಉದಯ್,......... ಜಯನಗರ  , ಮಂತ್ರಿ ಸ್ಕ್ವೇರ್ , ಕಮರ್ಷಿಯಲ್ ಸ್ಟ್ರೀಟ್, ಎಂದು ಎಲ್ಲೂ ಸರಿಯಾಗದೆ ಹತ್ತಿರದ ಗಾಂಧೀ ಬಜಾರ್ ನಲ್ಲೆ ಶಾಪಿಂಗ್ ಮಾಡಿದ ನಾನು, ....
ಅಂದು ಅಪ್ಪನ ಒಂದು ಸುಟ್ ಕೇಸ್ ನಲ್ಲೆ ಇಡಿ ಸಂಸಾರದ ಬಟ್ಟೆ -ಬರೆಯ ಹೊರುವಿಕೆ; ಇಂದು ೩ ಜನರಿಗೆ ಬರೋಬ್ಬರಿ ೪ ಬ್ಯಾಗ್ ಹೊತ್ತು.. ಪ್ರಯಾಣ ಆರಂಭ.
     ಪ್ರಯಾಣಕ್ಕೆ ನಿಮ್ಮ ಹಾರೈಕೆ- ಆಶೀರ್ವಾದ ಇರಲಿ ಸದಾ!

 ---------------------- ತರಾತುರಿಯಲ್ಲಿ ಮೂಡಿದ ಬರಹ
                            ಚಂದ್ರಿಕಾ ಹೆಗಡೆ 

08 April 2011

ಎಚ್ಚರಿಕೆ

ಭಾವಕ್ಕೆ ವೇಷ ತೊಡಿಸಿ 
ಸಿಕ್ಕಿದ್ದನೆಲ್ಲಾ  ಬಯಲಿನಲ್ಲಿ  ತೆರೆದಿಡಬೇಡ...
ಬಿರುಗಾಳಿ ಬಂದು ತರಗೆಲೆಯಾಗಿ 
ಚಿಂದಿಯಾದೀತು ಜೋಕೆ!

ಹೆಣೆದ ಮಾತನ್ನು ಹಂಚಿಕೊಳ್ಳದಿರು
ಬಲೆಯಲ್ಲಿಯ ಮೀನಿನಂತೆ 
ನಿನ್ನ ಮನ ವಿಲಿ ವಿಲಿ ಒದ್ದಾಡೀತು ಜೋಕೆ!

ಸಿಕ್ಕಂತೆ ಸಿಕ್ಕರೂ ಜನ
ಸ್ನೇಹಿತರು, ಗೆಳೆಯ-ಗೆಳತಿಯರು
ಕುದಿವ ಮನಕೆ ಆರೈಕೆ ನೀಡಲು 
ತಣಿಯದಿರು....
ಕಾದ ಎಣ್ಣೆಯಲ್ಲಿ ಹಾಕಬಹುದು ಹುಷಾರು!
ಹೋಳಿಗೆ ನೀಡುವ ನೆಪದಲಿ--
ಕಾದ ಕಬ್ಬಿಣವ  ಕಿವಿಗಿಡಬಹುದು,
ಗಾಯದ ಮೇಲೆ ಬರೆಯೂ .....
ಜತನವೆಂಬುದು ನಿನ್ನ ಜವಾಬ್ದಾರಿ...

..............................................ಚಂದ್ರಿಕಾ ಹೆಗಡೆ

28 March 2011

ಕಾದ ಮಾತು...

ಮರುಭೂಮಿಯೆಡೆ  ಒಂದು ಮರ
ತನ್ನಿ ಸನಿಹದ ಜಲವ ರೂಕ್ಷಗೊಳಿಸಿ
ಬೇರುಗೊಲೆಯಾದುದ ನಾ ಕಂಡೆ .
ಕಳವಳಗೊಂಡ ಸ್ವಂತ ಮನಸು
ನಿನ್ನ ಸಮಾಧಾನದ ಹಂಗಿಗೆ
 ಕಾದು ಕುಳಿತಿದೆ ಕಾಡಬೇಡ.
ಕೊಳೆತ ಜಿಡ್ಡು ಜಿಡ್ಡಾದ ಮನವ
ತೊಳೆಯುವಲ್ಲಿ ಸಹಕರಿಸು , ತಿಳಿನೀರಿನಿಂದಲೇ .
ಕುಡಿವ ನೀರಿಗೆ
 ಕೊಳೆ ತೊಳೆಯುವ  ಭಾಗ್ಯ?
ಮನ -ಕಾದುಕೊಂಡ ಮರಳು
ನೀ, ಎಷ್ಟೇ ನೀರ ಹನಿಸಿದರೂ
ಮಾಯ! ನಾ ಬಲ್ಲೆ.
ತಿಳಿ ತಿಳಿದು ಕಾಯುವ ನನ್ನೀ
ಕಾತುರಗಳು ಕೊಂಡಿ ಕೊಂಡಿಯಲ್ಲೇ
ಒತ್ತಟ್ಟಿಕೊಂಡಿವೆ ಗಾಢ ಬಂಧನದ ಬಿಸುಪಿನಲ್ಲಿ
ಮಂದ ಮಾರುತ ಮರೆಯಲ್ಲಿದೆ
ಸೌರಭ ಇನ್ನೆಲ್ಲಿ?
ಮನದ ತೊಳಲಾಟಕ್ಕಿಂತ
ನಾಲಿಗೆ ಹೊರಳುವಿಕೆ ಲೇಸು!


ಪ್ರಕಟ ಸಕಾಲಿಕ ೨೦೦೪ ಅಗಸ್ಟ್ ೨೬


ಕವನ ಬರೆದು ನಿರುಮ್ಮಳಾದ ಕ್ಷಣ ...

                                           ಚಂದ್ರಿಕಾ ಹೆಗಡೆ