29 ನವೆಂಬರ್ 2012

ಮಲೆಗಳಲ್ಲಿ ಮದುಮಗಳು- ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ

ಮಲೆಗಳಲ್ಲಿ ಮದುಮಗಳು-

                                    ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ 

            ಭಾಗ- ೪
 
 ನಾಟಿ ವೈದ್ಯರ ಬಗ್ಗೇನೂ  ಕಾದಂಬರಿ ಗಮನ ಸೆಳೆಯುತ್ತದೆ. ಗ್ರಾಮೀಣ ಪರಿಸರದ ಖಾಯಿಲೆಗಳು ನಿವಾರಣೆಯಾಗಬಲ್ಲ  ಆಶಾವಾದವನ್ನು ಈ ನಾಟಿ ವೈದ್ಯರಲ್ಲಿ ಇಡುತ್ತಿದ್ದರು. ಈ ಕಾದಂಬರಿಯಲ್ಲಿ " ಕಣ್ಣಾ " ಪಂಡಿತರು ನಾಟಿ ವೈದ್ಯಕ್ಕೆ ಹೆಸರಾದ ಮಲೆಯಾಳಿ ಪಂಡಿತರು . ಸಮೀಪದಲ್ಲಿ ಲಭ್ಯವಿರುವ ಸೊಪ್ಪು, ಬೇರು , ಗಡ್ಡೆಗಳೇ  ವೈದ್ಯಕೀಯ  ಮೂಲಿಕೆ . ಇವುಗಳಲ್ಲದೆಯೇ ಮಂತ್ರ ತಂತ್ರ ಮುಂತಾದವುಗಳ ನಂಬಿಕೆಯ ಕಲ್ಪನೆಯೂ ಕಂಡುಬರುತ್ತಿದೆ. ( ಇಂದಿಗೂ )
  ಗುತ್ತಿ " ನನಗೊಂದು ಅಂತ್ರ   ಬೇಕಿತ್ರಲ್ಲೋ "ಎನ್ನುವ ಬೇಡಿಕೆಯನ್ನು ಕಣ್ಣಾ ಪಂಡಿತರಲ್ಲಿ ಇಡುತ್ತಾನೆ . ಇಂದಿಗೂ ಮಲೆನಾಡಿನಲ್ಲಿ "ತುಂಡೆ " ಹಾಕುವದು ದೃಷ್ಟಿ ತೆಗೆಯುವದು .... ಮುಂತಾದ ವಿಧಾನ ಬಳಕೆಯಲ್ಲಿರುವದನ್ನು ಗಮನಿಸಿದರೆ , ಅದರ ಪ್ರಭಾವ / ನಂಬಿಕೆಯ ಕುರಿತಾಗಿ  ಯೋಚಿಸಬಹುದು . ಮಲೆನಾಡಿನಲ್ಲಿ ಇಂದಿಗೂ  ಊರಿಗೊಬ್ಬರಂತೆ ನಾಟಿ ವೈದ್ಯರಿರುವದು - ಈ ಎಲ್ಲ ನಂಬಿಕೆ ಇನ್ನು  ಚಾಲ್ತಿಯಲ್ಲ್ಲಿರುವದಕ್ಕೆ ಸಾಕ್ಷಿ. ಜೊತೆಗೆ ಇಂದಿನ  ವಿವಿಧ ರೋಗಗಳ specialist ಇರುವಂತೆ ಒಂದೊಂದು ರೋಗಕ್ಕೆ ಮಾತ್ರ ಮೂಲಿಕೆ ನೀಡುವ ಪಂಡಿತರು ಇರುತ್ತಿದ್ದರು. ಅದು ಹೆಚ್ಚಿನ ಸಲ ಪರಂಪರಾಗತವಾಗಿ ಬಂದ ವೃತ್ತಿಯೂ  ಆಗಿರುತ್ತಿತ್ತು . ಹಾಗೇನೆ ಮೂಲಿಕೆಯ  ಬಗ್ಗೆ  ಗೌಪ್ಯ  ಕಾದುಕೊಳ್ಳುತ್ತಿದ್ದರು .
 ( ಇಂದಿಗೂ )
                                                                        ಆಹಾರ ಪಾನೀಯಗಳ ವಿಚಾರಕ್ಕೆ ಬಂದಾಗ ಆರ್ಥಿಕವಾಗಿ ದುರ್ಬಲವಾಗಿರುವವರು  ಗಂಜಿಯೂಟ ಮಾಡುತ್ತಿದ್ದರು ." ಕುಳವಾಡಿ ಸಣ್ಣನ ಮಗಳು ಪುಟ್ಟಿ ಗಂಜಿ ತಯಾರಿಸುತ್ತಿದ್ದಳು ."
" ಕೆಲಸಕ್ಕೆ  ಹೋಗುವ ಮುನ್ನ ಗಂಜಿ ಕುಡಿದು ಹೋಗುತ್ತಿದ್ದರು ." ಊಟ ಇದೇ !
                                                                         "ಈ ಕಾದಂಬರಿಯಲ್ಲಿ  ಅಷ್ಟೇ ಅಲ್ಲ  ಹೆಗ್ಗಡತಿಯಲ್ಲೂ  ಆಹಾರ -ಪಾನೀಯ ವಿಷಯಕ್ಕೆ ಬಂದಾಗ ವಿಶೇಷ  ಆಕರ್ಷಣೆಯೆಂದರೆ , ಬಾಡು, ತುಂಡು, ಗಂಜಿಯೂಟ , ಸೀ  ಊಟ , ಕಳ್ಳು , ಬಗನಿ - ಈ ರೀತಿಯ ಪದ ಬಳಕೆಗಳು ಪುಟಕ್ಕೊಮ್ಮೆಯಾದರು  ಮೇಲಿಂದ ಮೇಲೆ ಕಾಣ ಸಿಗುತ್ತವೆ. ಒಂದೊಂದು ವರ್ಗದ ಜನರ ಅಂತಸ್ತು , ಆರ್ಥಿಕ ಸ್ಥಿತಿ - ಗತಿಗಳನ್ನು ಸೂಚಿಸಬಲ್ಲವು "- ಎಂದು ಡಾ . ಗುರುಪಾದ ಮರಿಗುದ್ದಿಯವರು 
ಅಭಿಪ್ರಾಯಪಡುತ್ತಾರೆ .
                                 ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮಲೆನಾಡಿನಲ್ಲಿ ಬಳಕೆಯಾಗುವ ಅನೇಕ ರಕ್ಷಣಾತ್ಮಕ  ವಸ್ತುಗಳು ಕಾಣಿಸಿಕೊಳ್ಳುತ್ತದೆ . ಕಂಬಳಿ ಕೊಪ್ಪೆ( ಮಳೆಯಿಂದ ರಕ್ಷಣೆ) ಗೊರಬು ( ಮಳೆಯಿಂದ  ರಕ್ಷಣೆ - ಗೊರಬಿನ ಚಿತ್ರಣ ತೇಜಸ್ವಿಯವರ ಕೃತಿಗಳಲ್ಲೂ  ಬೇಕಾದಷ್ಟು .... ಸಿಗುತ್ತವೆ.) ಹಾಳೆ ಟೊಪ್ಪಿಗೆ , ಎಲೆ ವಸ್ತ್ರ ..... ಮಳೆ  ಬಿಸಿಲುಗಳಿಂದ  ರಕ್ಷಿಸಿಕೊಳ್ಳುವ ವಸ್ತುಗಳು . ಆಯಾ ಕೆಲಸಗಳಿಗೆ ತಕ್ಕಂತೆ ವೇಷ ಧರಿಸುವದು ಇಂದಿಗೂ ಅಲ್ಲಿನ ಪರಿಸರಕ್ಕೆ ಅನಿವಾರ್ಯವೇ! ಇಂದು , ಅಂದಿನ ಕಂಬಳಿ ಕೊಪ್ಪೆಯ ಬದಲಿಗೆ ಪ್ಲಾಸ್ಟಿಕ್ ಧಾಳಿ ಇಟ್ಟರೂ  ಭಯಂಕರ ಮಳೆಯ ತಡೆಗೆ ಕಂಬಳಿ ಅತ್ಯವಶ್ಯಕವೇ  ಆಗಿರುತ್ತದೆ . ಕಾದಂಬರಿಯ  ಆರಂಭದಲ್ಲಿ ಗುತ್ತಿ ಸಿಂಬಾವಿಗೆ  ಹೊರಟಿದ್ದ. ಹೆಗಲಿಗೆ ಕಂಬಳಿ ಕೊಪ್ಪೆ ಹಾಕಿದ್ದ ಎಂಬ ಅಂಶವನ್ನು ಗಮನಿಸಬಹುದು. 
                       ಕುವೆಂಪು ಕಾದಂಬರಿಗಳು  ಮಲೆನಾಡಿನ  ಬೇಟೆಯ ಚಿತ್ರಣ, ತಂತ್ರ ವಿವರಗಳನ್ನು ನೀಡುವ ಅಪರೂಪದ ಕೃತಿಗಳಾಗಿವೆ .  ಪ್ರಾಣಿ ಬೇಟೆ ಪುರುಷರಿಗೆ ಮೀಸಲಾದರೆ , ಹಕ್ಕಿ ಮೀನುಗಳೆಲ್ಲಾ ಸ್ತ್ರೀಯರಿಗೆ  ಮಕ್ಕಳಿಗೆ ಪ್ರಧಾನವಾಗಿತ್ತು . ಈ ಎರಡೂ ಕಾದಂಬರಿಯಲ್ಲಿ ಕಂಡು ಬರುವ  ಬೇಟೆಯ ಚಿತ್ರಣ ಮಲೆನಾಡಿಗರ ಧೈರ್ಯ  ಸಾಹಸಗಳ ಪ್ರತಿಬಿಂಬ . ಅವರ ಹೋರಾಟದ ಬದುಕಿಗೂ ಸಾಕ್ಷಿ  ಹೇಳುತ್ತವೆ. 
                                                           ಮಲೆನಾಡಿಗರು ಖಾಯಿಲೆ ಕಸಾಲೆಗಳಲ್ಲಿ ಎರಡು ರೀತಿಯ ಔಷಧ ಉಪಚಾರ ಕೈಗೊಳ್ಳುತ್ತಿದ್ದರು . ಈ ಕಾದಂಬರಿಯಲ್ಲೇ ಇದನ್ನು ಗಮನಿಸಬಹುದು . ಒಂದು ನಿಸರ್ಗೋಪಚಾರ ಮತ್ತೊಂದು ಮಂತ್ರೋಪಚಾರ . ಒಂದು ತಂತ್ರ ವಿದ್ಯೆಗೆ " ಭೂತ  ಜಕ್ಕಿಣಿ ಪಂಜ್ರೋಲ್ಲಿಗೆ ಹರಕೆ ಕೊಡುವದು ' ಎಂಬ ಪ್ರಸ್ತಾಪ , ಇಂಬಳಗಳಕಾಟ ತಪ್ಪಿಸುವದಕ್ಕೆ ಉಪ್ಪು ಸುಣ್ಣ ಮಿಶ್ರಣ ಮಾಡಿ  ಬಳಸುವದು , ಹೋಗೆ ಸೊಪ್ಪನ್ನು ಇಂಬಳಗಳ  ಮೇಲೆ ಹಾಕುವದು , ಮೈಗೆ ಗಾಯವಾಗಿ ನಂಜಾದರೆ  ಕಾಡು ಜೀರಿಗೆ ಮತ್ತು  ಅರಿಸಿನ ಅರೆದು ಗಾಯಕ್ಕೆ ಹಚ್ಹ್ಚುವದು ..... ಇತ್ಯಾದಿ.

1 ಕಾಮೆಂಟ್‌:

  1. ಕುವೆಂಪು ಮಲೆನಾಡಿನ ವಾಸ್ತವ ಚಿತ್ರಣ ಕೊಟ್ಟಿರುವುದನ್ನು ನಿಮ್ಮ ಪ್ರಬಂಧದಲ್ಲಿ ಚೆನ್ನಾಗಿ ವಿವರಿಸಿದ್ದಿರಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ