27 ನವೆಂಬರ್ 2012

ಮಲೆಗಳಲ್ಲಿ ಮದುಮಗಳು 

                                   ಕಾದಂಬರಿಯಲ್ಲಿ ಚಿತ್ರಿತವಾಗಿರುವ ಮಲೆನಾಡಿನ ಚಿತ್ರಣ- 300 ಪುಟಗಳನ್ನು ಮಿತಿಯಲ್ಲಿರಿಸಿ .

                                                   ಭಾಗ -೩

ಆಧುನಿಕ  ಸಮಾಜದಲ್ಲಿ ಇಂದಿಗೂ ಕಾಡುತ್ತಿರುವ ಸಾಮಾಜಿಕ ಸಮಸ್ಯೆ "ವರದಕ್ಷಿಣೆ ". ಇದಕ್ಕೆ ವ್ಯತಿರಿಕ್ತವಾದ ಪದ್ಧತಿಯನ್ನು  ಕಾದಂಬರಿ ತಿಳಿಸುತ್ತಿದೆ. ನಾಯಿ ಗುತ್ತಿ  ಮುಕುಂದಯ್ಯನನ್ನು  ಕುರಿತು " ಏನ್ರಯ್ಯ ಹೆಣ್ಣು ಕೊಡೋರಿಗೇನು  ಬರಗಾಲ? ದುಡ್ದೊಂದಿದ್ರೆ ? ಕೈ ತುಂಬಾ ತೇರ ಕೊಟ್ರೆ ದಮ್ಮಯ್ಯ ಅಂತ ಕೊಡ್ತಾರೆ " ಎನ್ನುವನು . ಈ ತೆರ  ಪದ್ಧತಿ ವಿವಾಹದ ವೇಳೆ   ಮದುವೆಯ  ಗಂಡು ತಾನು ಮದುವೆಯಾಗಲಿರುವ ಕನ್ಯೆಗೆ ಕೊಡಬೇಕಾದ ಒಡವೆ , ಹಣ, ವಸ್ತು - ಕಾದಂಬರಿಯಲ್ಲಿ ಕಂಡು ಬರುವ ಈ ಪದ್ಧತಿ - ಇಂದು ಮಲೆನಾಡಿನಲ್ಲಿ ಕಾಣಬಹುದು.( ಅದರಲ್ಲೂ ಈ ಬರಹ ಬರೆದು 12 ವರ್ಷ ಕಳೆಯಿತು . ಈಗೀಗ  ಮಾವನ ಮನೆಯಲ್ಲಿ  ಇರಬಹುದಾದ  ಎಲ್ಲ ಸಾಲಗಳನ್ನು ಪೂರೈಸಿ  ಅಳಿಯ ಬರಬೇಕು.... ಕೃಷಿಕ ಅಳಿಯನಾಗಿದ್ದರೆ!)
                                      ಕುವೆಂಪು ಕಾದಂಬರಿಯಲ್ಲಿ ಕಂಡು ಬರುವ ಮಲೆನಾಡಿನ ಸ್ತ್ರೀಯರು ಆಯಾ ಜಾತಿಗಳ ಸ್ಥಿತಿ ಗತಿಗಳ  ಪ್ರತಿನಿಧಿಯಾಗಿದ್ದಾರೆ . ತಾಯಿಯಾಗಿ ,  ಸೋದರಿಯಾಗಿ, ಪ್ರೇಯಸಿಯಾಗಿ , ಒಡತಿಯಾಗಿ , ಕೂಲಿಯಾಳಾಗಿ - ಹೀಗೆ ಪ್ರೀತಿ - ಪ್ರೇಮ, ಕರುಣೆ - ದ್ವೇಷ , ನಿರಾಶೆ, ಹತಾಶೆ  ಧೈರ್ಯ ......ಎಲ್ಲವನು ಜೀವಂತವಾಗಿ ಉಸಿರಾಡಿಸುವ  ಪರಿ ಕಂಡುಬರುತ್ತದೆ .
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಂಡು ಬರುವ "ವಿವಾಹ" ಪ್ರಸಂಗ ,ಆ ಪ್ರದೇಶದ ವಿವಾಹ ಪದ್ಧತಿಯ ಪ್ರತಿಬಿಂಬದಂತಿದೆ . ಇಂದಿನ  ಆಧುನಿಕ  ಯಾಂತ್ರಿಕ ಯುಗಕ್ಕೆ ಈ ಎಲ್ಲ ಆಚರಣೆಗಳು  ಕುಂಠಿತವಾಗುತ್ತ ಬಂದರೂ  ಸಂಪೂರ್ಣವಾಗಿ ಮರೆತಿಲ್ಲ . ಮಾಡುವೆ ಮನೆಯ ಹಸೆ  ಗೋಡೆಯ  ಅಲಂಕಾರ , ಸುತ್ತ ಮುತ್ತಲಿನಲ್ಲಿ  ಸುಲಭವಾಗಿ ಸಿಗಬಹುದಾದ  ತೆಂಗು , ಅಡಿಕೆಯ ಗರಿಗಳಿಂದ ಕೂಡಿದ  ಚಪ್ಪರ , ಅದಕ್ಕೆ ಅಲಂಕಾರಿಕವಾಗಿ  ಗಿಡಗಳು , ಹಣ್ಣುಗಳು , ಈ ಎಲ್ಲ  ಪರಿ ಮಧ್ಯಂತರ ಕಾಲಘಟ್ಟದಲ್ಲಿ ಸ್ವಲ್ಪ ಮರೆತಿದ್ದರೂ  ಇಂದು ಒಂದು ರೀತಿಯ " fashion " ಆಗಿ ಕಂಡು  ಬರುತ್ತಿರುವದನ್ನು ಗಮನಿಸಬಹುದು. ಆಧುನಿಕ ತಂತ್ರದ ಜೊತೆಯಲ್ಲಿಯೇ ನಿಸರ್ಗದಿಂದ ದೂರ ಹೊರಟ  ಮಾನವ ಪುನಃ ತಲುಪಿದ್ದು ಮತ್ತೆ ಅಲ್ಲಿಗೇ !
                                  ಪ್ರಾಣಿ ಸಾಕಣೆಯ  ವಿಷಯದ ಕುರಿತಾಗಿ ಹೇಳಲೇ ಬೇಕು . ಈ ಕಾದಂಬರಿ  ಆ ಸಮಯದಲ್ಲಿ ಇರುವ ಸ್ಥಿತಿ ಗತಿ ಅವಲೋಕಿಸುತ್ತದೆ . ಮಾನವ ಹಸಿವಾದಾಗ ಬೇಟೆಯಾಡಿ ತಿನ್ನುತ್ತಿದ್ದ  ಕಾಲದ ಮುಂದುವರಿಕೆಯಾಗಿ ಆತ  ಪ್ರಾಣಿ  ಸಾಕತೊಡಗುವ  ಸುದಾರಣೆಯ ಹಂತ ಹೊಸತೊಂದು ಬೆಳವಣಿಗೆ . ಅದೇ ರೀತಿ ಅದನ್ನೊಂದು ಉದ್ಯೋಗವನ್ನಾಗಿ ಸ್ವೀಕರಿಸಿದ್ದು ಗಮನಾರ್ಹ . ಅದರ  ಉಪಯೋಗವನ್ನು ಇನ್ನಿತರ ಕ್ಷೇತ್ರಗಳಿಗೆ ವಿಸ್ತರಿಸಿದ್ದು ಮಹತ್ವದ ಅಂಶ. ಈ ಕಾದಂಬರಿ ಇಂತಹ ಚಿತ್ರಣವನ್ನು ಪುಟ ೪೦ ರಲ್ಲಿ " ತುಸು ಹೊತ್ತಿನಲ್ಲಿಯೇ ಜಗುಲಿಯ ಎದುರಾಗಿ ಅಂಗಳದಲ್ಲಿದ್ದ ಒಡ್ಡಿಗಳಲ್ಲಿಯೂ , ಒಡ್ಡಿಗಳ  ಹಿಂದಿದ್ದ ಕೊಟ್ಟಿಗೆಯಲ್ಲಿಯೂ  ಗೊರಸಿನ ಸದ್ದು, ಕೊಂಬಿನ ಸದ್ದು , ದೊಂಟೆಯ ಸದ್ದು , ಹೋತದ ಸೀಗಿನ ಸದ್ದು, ಸಲಗನ  ಗುರು-ಗುರು  ಸದ್ದು , ಒಂದಾದ ಮೇಲೊಂದು ಕೇಳಿಸತೊಡಗಿತು ."....ಮಲೆನಾಡಿನ ಕೊಟ್ಟಿಗೆ - ಪ್ರಾಣಿ ಸಾಕಣೆ, ಅದರ ಮೇಲೆ ಮಲೆನಾಡಿಗರು ಇಟ್ಟಂತಹ  ಪ್ರೀತಿ -ವಿಶ್ವಾಸ  ಎಲ್ಲವನ್ನು ಕಾದಂಬರಿ ಚಿತ್ರಿಸುವದು.
                                                                                                                               ಕೊಟ್ಟಿಗೆ ದನ ಕರುಗಳಿಗೆ ಮೀಸಲಾದರೆ ದೊಡ್ಡಿ ಕುರಿ, ಕೋಳಿ ಹಂದಿಗೆ ಸೀಮಿತ . ಕಾದಂಬರಿಯಲ್ಲಿ ಕಂಡು ಬರುವ ಚಿತ್ರಣ ಇಂದಿಗೆ ವ್ಯಾಪಕವಾಗಿ ಕಂಡು ಬರದಿದ್ದರೂ  ತನ್ನ  ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವದನ್ನು ಇನ್ನೂ  ಅಲ್ಲಿ ಕಾಣಬಹುದು. ಸಾಮಾನ್ಯವಾಗಿ ಅಲ್ಲಿಯೇ ಸುತ್ತ ಮುತ್ತಲಿನಲ್ಲಿ  ಸಿಗುವ ತೆಂಗಿನ ಗರಿ, ಅಡಿಕೆಯ ಸೋಗೆ , ಒಣ ಹುಲ್ಲು ಇವುಗಳನ್ನು 'ಮಾಡಿನ ' ಹೊದಿಕೆಯಾಗಿ ಉಪಯೋಗಿಸಿ , ಅಡಿಕೆಯ ಮರವನ್ನು ಸೀಳಿ ( ಇದಕ್ಕೆ ಎಂದು ಅಡಿಕೆ ಮರವನ್ನು ಕಡಿಯದೇ ಬಿದ್ದಿರುವ ಮರದ ಉಪಯೋಗ!) ಅದನ್ನು  ಇತರ ಪ್ರಾಣಿಗಳಿಂದ ಸಾಕುಪ್ರಾಣಿಗಳನ್ನು  ರಕ್ಷಿಸಲು 'ತಟ್ಟಿ "( ತಡೆ ಗೋಡೆ ) ನಿರ್ಮಿಸಲಾಗುತ್ತಿತ್ತು . ಆದರೆ ಅದಕ್ಕೆ ವ್ಯತಿರಿಕ್ತವಾಗಿ    ಈಗ ಸಿಮೆಂಟಿನ  ಗೋಡೆ, ಮಣ್ಣಿನ ನೆಲದ ಬದಲಾಗಿ ಕಲ್ಲು.... ಸಿಗೆ ಒಣ ಹುಲ್ಲುಗಳ  ಬದಲಾಗಿ  ಹೆಂಚು / ಸಿಮೆಂಟಿನ ಶೀಟ್ / ಸ್ಲಾಬ್  ಬಳಸುತ್ತಿರುವದು  ಬದಲಾದ ಮನಸ್ಥಿತಿಗಳ ಪ್ರತಿಬಿಂಬ .
                                                                                     ಹಳ್ಳ ತೊರೆಗಳು ವಿಪುಲವಾಗಿರುವ ಮಲೆನಾಡಿನಲ್ಲಿ  ಮಳೆಗಾಲವು ರಮ್ಯವಾದರೂ ಗಂಭೀರತೆಯನ್ನು  ಕಾದುಕೊಳ್ಳುವ  ದೃಶ್ಯ  ಇಲ್ಲಿದೆ. ಸಾಮಾನ್ಯ  ಮಲೆನಾಡಿಗರೆಲ್ಲರ  ಮಳೆ ಅನುಭವವನ್ನು  ಒಂದಾಗಿಸುವ ಪ್ರಯತ್ನ ಇಲ್ಲಿನ ಒಂದೆರಡು ಘಟನೆಯನ್ನು ಹೇಳುವದರ ಮೂಲಕ ಪ್ರಯತ್ನಿಸ ಲಾಗಿದೆ .

ಗುತ್ತಿ ತಿಮ್ಮಿಯನ್ನು ಕಾಣಬೇಕೆಂದು ಲಕ್ಕುಂದವೆಂಬ ಊರಿನ  ಮೂಲಕ ಹೋಗುತ್ತಿದ್ದಾನೆ .

" ಗುತ್ತಿ ಇನ್ನೂ ಸೀತೂರು  ಗುಡ್ಡದ  ನೆತ್ತಿಗೇರಿರಲಿಲ್ಲ . ಗಾಳಿ ಪ್ರಾರಂಭವಾಗಿ ಕಾಡು ಹೋ ಎನ್ನತೊಡಗಿತ್ತು . ಮುಗಿಲು  ಮೊಳಗಿತು ಮಿಂಚಿತು . ಮೊದ  ಮೊದಲು ಅಲ್ಲಿಲ್ಲೊಂದು ತೋರ ಹನಿ ಮರದೆಲೆಯ ಮೇಲೆ ಬಿದ್ದ ಸದ್ದಾಯಿತು . ( ನೆಲದ ಮೇಲಲ್ಲಾ !) ಗುತ್ತಿ ಹೆಗಲ ಮೇಲಿದ್ದ ಕಂಬಳಿ  ಕೊಪ್ಪೆಯನ್ನು  ಬೇಗ ಬೇಗನೆ ಸೂಡಿ ಕೊಳ್ಳುತ್ತಿದ್ದಾಗಲೇ  ಮುಂಗಾರು ಮಳೆ ಕಾಡೆಲ್ಲಾ ಕಂಗಾಲಾಗುವಂತೆ ದನಗೋಳಾಗಿ ಸುರಿಯ ತೊಡಗಿತು .
                                                                                        ಹಳ್ಳದ ಅಂಚಿಗೆ ಗುತ್ತಿ ಬಂದು ನಿಂತು ನೋಡಿದಾಗ ಕತ್ತಲೆಯಲ್ಲದೆ ಮತ್ತೇನೂ ಕಾಣಿಸಲಿಲ್ಲ. ನೀರಿನ ಭೋರಾಟದಿಂದಲೇ  ಹಳ್ಳದ ಏರಿಕೆಯನ್ನು ಊಹಿಸುತ್ತಾ ನಿಂತಿದ್ದಾಗ ಒಂದು ಸಾರಿ ಮಿಂಚಿತು. ವೈರಿ ದಳದ ಮೇಲೆ ರಭಸದಿಂದ ದಾಳಿ ನುಗ್ಗುವ ತುರಗ ಸೇನೆಯಂತೆ ಉನ್ಮತ್ತ ವೇಗದಿಂದ ಹರಿದೋಡುತ್ತಿದ್ದ  ತೊರೆಯ ತೆರೆಗಳು ಪಳ ಪಳನೆ  ಮಿಂಚಿದವು . ಹೊನಲಿನ ಮಧ್ಯೆ ವೇಗವಾಗಿ ಮರದ ತುಂಡುಗಳು  ಕಸ ಕಡ್ಡಿಗಳೂ ಅದರ ರಭಸಕ್ಕೆ ಸಾಕ್ಷಿಯಾಗಿದ್ದವು . ಬೇಸಗೆಯಲ್ಲಿ ಒಂದೆರಡು ಅಡಿಯಗಲವಾಗಿರುತ್ತಿದ್ದ ಆ ಹಳ್ಳ ಈಗ ಸುಮಾರು  ಇಪ್ಪತ್ತೈದು  ಮೂವತ್ತು  ಅಡಿಗಳಷ್ಟು ಅಗಲವಾಗಿ ಹರಿಯುತಿತ್ತು ."


ಮಲೆನಾಡಿನಿಂದ ದೂರ ಇದ್ದರೂ ಇನ್ನಷ್ಟು ಉಮೇದು - ವಿರಹವೂ....ಮಿಶ್ರಣ.... ಹೆಮ್ಮೆ ..... ಇವುಗಳಿಂದ ಕೂಡಿದವಳಾಗಿ 
                 ...... ಚಂದ್ರಿಕಾ ಹೆಗಡೆ ........

---------------------------------ಮುಂದುವರೆಯುವದು ----------------------------------                                                                                             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ