19 ನವೆಂಬರ್ 2012

ನಾನು ಕನ್ನಡ ಸ್ನಾತಕೋತ್ತರ  ತರಗತಿಯಲ್ಲಿ ಓದುತ್ತಿದ್ದಾಗ  ಕ್ಲಾಸ್ ಸೆಮಿನಾರ್ ಗೆಂದು ಸಿದ್ಧಪಡಿಸಿದ್ದ ಒಂದು ಚಿಂತನೆ.
ತಪ್ಪು- ಒಪ್ಪು.... ತಮ್ಮದು. ಅದೇ ಯಥಾವತ್ತಾಗಿ ದಾಖಲಿಸಿದ ಹೆಮ್ಮೆ! ಆ ಪ್ರತಿ ಸಿಕ್ಕ ಖುಷಿಯಲ್ಲಿ ನಾನಿದ್ದೇನೆ. ಮತ್ತೊಂದು ವಿಚಾರವೆಂದರೆ ಈ ಪತ್ರಿಕೆಯನ್ನು ಓದಲು ಆ ಸೆಮಿನಾರ್ ನಡೆಯಲೇ ಇಲ್ಲ! ಅದಕ್ಕೆ ಫ್ರೆಶ್ ಆಗಿಯೇ ಇದೆಯೇನೋ :)



 

ಮಲೆಗಳಲ್ಲಿ  ಮದುಮಗಳು  

                           --ಕಾದಂಬರಿಯಲ್ಲಿ ಚಿತ್ರಿತವಾಗಿರುವ ಮಲೆನಾಡಿನ ಜೀವನ ಚಿತ್ರಣ ( 300 ಪುಟಗಳನ್ನು ಮಿತಿಯಲ್ಲಿರಿಸಿ)
                                                   
                                            ಭಾಗ -1 


ಕುವೆಂಪುರವರು ಎರಡೇ ಕಾದಂಬರಿಗಳನ್ನು ಬರೆದರೂ ಅವು ಮಹತ್ಕೃತಿಗಳಾಗಿವೆ . ಎರಡೂ ಕಾದಂಬರಿಗಳ ಕಥೆ , ನಿರೂಪಣಾ  ವಿಧಾನ , ಪ್ರಾದೇಶಿಕತೆ , ಪಾತ್ರ - ಮುಂತಾದ ಅಂಶಗಳಲ್ಲಿ  ಮಲೆನಾಡಿನ ಹಿನ್ನಲೆಯನ್ನು ಕಾಣುತ್ತೇವೆ .ಮಲೆನಾಡಿನ ಜೀವನವನ್ನು ವ್ಯಾಪಕವಾಗಿ ಅದರ ಎಲ್ಲಾ ಸಂಕೀರ್ಣತೆ , ಜಟಿಲತೆಗಳನ್ನು  ಸೂಕ್ಶ್ಮವಾಗಿ ವಿವರವಾಗಿ ತಿಳಿಸುತ್ತಾರೆ. ಎರಡೂ ಕಾದಂಬರಿಗಳೂ ಕಾದಂಬರಿ ಪ್ರಿಯರಿಗೆ ಕಥೆ/ ಪಾತ್ರ ಪ್ರಪಂಚ/ ಹೀಗೆ ಕಥೆಯ ಹಿನ್ನೆಲೆಯಲ್ಲಿ ಇಷ್ಟವಾದರೆ , ನಾಟಕ ಮಿತ್ರರಿಗೆ ಸಂಭಾಷಣೆ , ಓಘ, ನಾಟಕೀಯತೆ  ಮನ ಗೆಲ್ಲಬಹುದು. ಪರಿಸರ ಚಿಂತಕರಿಗೆ ಒಂದಿಷ್ಟು ಹೊಸ ಭಾವ ಮೂಡಬಹುದು. ಪರಿಸರ ವಿಜ್ಞಾನಿಗಳಿಗೆ ಹೀಗೂ ಇದೆಯೇ...ಎಂಬ ಆಶ್ಚರ್ಯ ! ಮಲೆನಾಡಿನಿಂದ ಬಂದ ನನ್ನಂಥವರಿಗೆಂತೂ ...ಊರಿನ ಘಟನೆಯ ಸುಂದರ ದಾಖಲೆಯ ಹಾಗೆ ಕಾಣಲೂ   ಸಾಧ್ಯ!

                                                                                            ಮಲೆನಾಡಿಗರೆಲ್ಲರೂ ಕುವೆಂಪು ಆಗಲಿಲ್ಲ... ಆಗಲೂ ಸಾಧ್ಯವಿಲ್ಲ . " ಕುರುಡನುಂ  ಕನ್ನಡಿಗೊಡೆಯನಾದ  ಮಾತ್ರದಿಂ ಕಾಣ್ಬನೇಂ ? ಎಂಬಂತೆ , ಪ್ರಕೃತಿಯ  ಸೂಕ್ಶ್ಮತೆಗಳನ್ನು ಅವಲೋಕಿಸುವ ದೃಷ್ಟಿ , ಅಭಿವ್ಯಕ್ತಿಸುವ ಮಾಧ್ಯಮ ಸಹಕಾರವೂ  ಅಗತ್ಯ .
                                                                                                  ಪಂಪನ  ಬನವಾಸಿಯ  ವರ್ಣನೆಯಂತೆ ಕುವೆಂಪುರವರ 'ಮಲೆನಾಡಿನ ಬಣ್ಣನೆ '  ಈ ರೀತಿ :
" ಹೋಗುವೆನು  ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ , ಸಿರಿಯ ಚೆಲುವಿನ ರೂಡಿ ಗೆ
ಬೇಸರಾಗಿದೆ ಬಯಲು , ಹೋಗುವೆ ಮಲೆ ಯ ಕಣಿವೆಯ ಕಾಡಿಗೆ
ಹಸುರು ಸೊಂಪಿನ , ಬಿಸಿಲ ತಂಪಿನ ,  ಗಾನದಿಂಪಿನ  ಕೂಡಿಗೆ !

ಕುವೆಂಪು " ಮಲೆನಾಡಿನ ಚಿತ್ರಗಳು " ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುವರು :"ನೆನಹು ಬಾಳಿನ ಬುತ್ತಿ.ಮನಸ್ಸಿಗೆ ಜೀವನದ ಅನುಭವಗಳನ್ನು ಆಯ್ದುಕೊಳ್ಳುವ ಶಕ್ತಿಯಿದೆ . ತನಗೆ ಬೇಕಾದುದನ್ನು ಅದು ಹಿತವಾಗಿರಲಿ , ಅಹಿತವಾಗಿರಲಿ - ಉಳಿಸಿಕೊಂಡು ಉಳಿದುದನ್ನು ಮರೆತುಬಿಡುತ್ತದೆ .ಜೀವನ ಸಂಪತ್ತು ಅದರ ಅನುಭವಗಳಲ್ಲಿ ಇದೆ. ನೆನಪು ಆ ಅನುಭವಗಳ ನಿಧಿ ."
ಕುವೆಂಪು ಕೃತಿ ಎಷ್ಟೋ ಸಲ ಜೀವನ ಚರಿತ್ರೆಯ ಹಾಗೆ ಕಾಣುವದು ಇದಕ್ಕೆನೋ !

ಇದೇ  ಕೃತಿಯಲ್ಲಿ ಮುಂದುವರೆದು  ಹೇಳುತ್ತಾರೆ :
"ನಮ್ಮ ಮನೆ ಪರ್ವತಾರಣ್ಯಗಳ ತೊಡೆಯ ಮೇಲೆ ಕೂತಿದೆ  ಎಂಬ ವಿಚಾರವನ್ನು ನೀವು 'ಚಿತ್ರ'ಗಳಿಂದ ತಿಳಿಯುತ್ತೀರಿ .
( ಚಿತ - ಮಲೆನಾಡಿನ ಚಿತ್ರಗಳು  ಕೃತಿಯಲ್ಲಿದೆ .) ಮನೆಯ ತೆಂಕಣ ದಿಕ್ಕಿಗೆ , ಮನೆಗೆ ಮುಟ್ಟಿಕೊಂಡೇ  ಏರಿ ಏರಿ ಹೋಗುವ ಬೆಟ್ಟದೋರೆಯಿದೆ . ಐದು ನಿಮಿಷದಲ್ಲಿಯೇ ಅದರ ನೆತ್ತಿಗೆ ಹೋಗಬಹುದು .ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು  ಸುತ್ತಲೂ ಸ್ವಲ್ಪ ಬಯಲಾಗಿ, ದೂರದ ದೃಶ್ಯಗಳನ್ನು ನೋಡಲು ಅನುಕೂಲವಾಗಿದೆ .( ಮಲೆಗಳಲ್ಲಿ ಮದುಮಗಳು  ಕೃತಿಯಲ್ಲಿ ಬರುವ " ಹುಲಿಕಲ್ಲು "ವರ್ಣನೆಯೂ ಹೀಗೆ ಇದೆಯಲ್ಲಾ !)
  ಕುವೆಂಪು " ಮಲೆಗಳಲ್ಲಿ ಮದುಮಗಳು " ಕೃತಿಯ ಸನ್ನಿವೇಶಗಳನ್ನು ಒಂದೇ ತನ್ಮಯತೆಯಿಂದ ಚಿತ್ರಿಸುತ್ತಾ ಹೋಗುತ್ತಾರೆ . ಇಲ್ಲಿ ಯಾರನ್ನೂ  ನಿರ್ಲಕ್ಷಿಸುವಂತಿಲ್ಲ . ನಾಯಕನ ಪಾತ್ರದಲ್ಲಿ ಪೈಪೋಟಿ ಇರುವಂತಿದೆ . ಒಂದು ಪ್ರಾಣಿಯೂ ನಾಯಕನಂತೆ ಮಹತ್ವದ ಪಾತ್ರವಾಗುತ್ತದೆ .ಅದೇ "ಹುಲಿಯ" . ಹೆಸರಿನ ಆಯ್ಕೆಯೂ ಹೆಂಗಿದೆ ನೋಡಿ. ಇದರ ಒಡೆಯ ಮತ್ತೊಬ್ಬ ನಾಯಕ 'ಗುತ್ತಿ'. ಇವರಿಬ್ಬರ ಸ್ನೇಹ ಹೇಗಿತ್ತೆಂದರೆ ಗುತ್ತಿ ಕರೆಯಲ್ಪಡುತ್ತಿದ್ದುದು 'ನಾಯಿ ಗುತ್ತಿ" ಎಂದು!
ಮಲೆನಾಡಿನ ದಿನ ಗಂಭೀರ , ದಟ್ಟ , ಗಹನ ಸ್ವರೂಪದಂತೆಯೇ , ತುಂಬ ಸಂಕೀರ್ಣವಾದ ಜೀವನ , ನಿಗೂಢತೆ  ಈ ಕೃತಿಯದು . ಮಲೆನಾಡಿನ ಬದುಕಿನ ಎಲ್ಲ ಸಾಧ್ಯತೆಗಳನ್ನು ಕುವೆಂಪು ಕಂಡರಿಸುತ್ತಾರೆ .
ಇವುಗಳನ್ನು ನೋಡುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.

-----------------ಮುಂದಿನ ಭಾಗದಲ್ಲಿ ಮುಂದುವರಿಸುವೆನು.

ಚಂದ್ರಿಕಾ ಹೆಗಡೆ .

 






1 ಕಾಮೆಂಟ್‌: