20 ನವೆಂಬರ್ 2012

ಮಲೆಗಳಲ್ಲಿ  ಮದುಮಗಳು 

                                                - - ಕಾದಂಬರಿಯಲ್ಲಿ ಚಿತ್ರಿತವಾಗಿರುವ  ಮಲೆನಾಡಿನ  ಜೀವನ ಚಿತ್ರಣ
( 300 ಪುಟಗಳ ಮಿತಿಯಲ್ಲಿ)



                                                          ಭಾಗ-2


ಮಲೆನಾಡಿನ ಅಂದಿನ ಹಲವು ಸಾಮಾಜಿಕ ಕುಂದು, ಶೋಷಣೆ , ದುರಂತಗಳ ದಾಖಲೆಯನ್ನು  ಈ ಕಾದಂಬರಿಯಲ್ಲಿ ಅವಲೋಕಿಸಬಹುದು . '' ಹೊಲೆಯರ ಕೇರಿಗೆ ಹೋಗುವದು ತಮ್ಮ ಮೇಲ್ಮೈಗೆ ಕುಂದು ಎಂದು ಒಕ್ಕಲಿಗರು ಭಾವಿಸಿದರೆ , ಉತ್ತಮರು ತಮ್ಮ ಕೇರಿಗೆ ನುಗ್ಗಿದರೆ ಅನಾಹುತವಾಗುವದೆಂದು  ಹೊಲೆಯರೂ  ಭಾವಿಸುತ್ತಿದ್ದರು. ತಿಮ್ಮಪ್ಪ ಹೆಗ್ಗಡೆ ಕೆಲಸಕ್ಕೆ ಕರೆಯಲು ಬಂದು ಕೂಗಿದಾಗ ಯಾರೂ ಉತ್ತರಿಸುವ ತಂಟೆಗೆ ಹೋಗದಿರುವದನ್ನು ನೋಡಿ ಆ ಕೇರಿಯ ಹಿರಿಯ ಕುಳವಾಡಿ 
' ಏಯ್  ಪುಟ್ಟಿ ಸಣ್ಣ ಹೆಗ್ಡೇರ ಸವ್ವರಿಬಂದ ಹಾಗೆ ಕಾಣ್ತದೇ , ಕೆಲಸಕ್ಕೆ ಕರೆಯೋಕೆ. ಎಲ್ಲರೂ ಬಿಡಾರದ ಒಳಗೆ ಇದ್ದಾರೆ. ಕೇರಿ ಒಳಗೆ ನುಗ್ಗಿದರೆ ಇಡೀ  ಕೇರಿಗೆ ಅಪಸಕುನ ! ನಮ್ಮ ದೆಯ್ಯ ದ್ಯಾವರಿಗೆ ಮುಟ್ಟು  ಚಿಟಾದ್ರೆ  ಕೇರಿಗೆ  ಕೇರೀನೇ  ತೆಗೆದು "  ಎಂದು ಎಚ್ಚರಿಸುತ್ತಾನೆ . ಇಂತಹುದೇ ಒಂದು ಚಿತ್ರ ಗೋರೂರುರವರ   ಹಳ್ಳಿಯ ಚಿತ್ರಗಳು ಮತ್ತು ಇತರ ಪ್ರಬಂಧಗಳಲ್ಲಿ ಕಂಡುಬರುತ್ತದೆ. -" ಕಾಡಿನಲ್ಲಿ ಬ್ರಾಹ್ಮಣರಿಬ್ಬರು  ದಾರಿ ತಪ್ಪಿ ಒಂದು ಇಂತಹುದೇ ಕೇರಿಗೆ ( ಆದಿ ಕರ್ನಾಟಕದ ) ಬಂದಿರುತ್ತಾರೆ. ಅವರು ಉತ್ತಮ ಜಾತಿಯವರು ಎಂದು ತಿಳಿದ ತಕ್ಷಣ ಆ ಆದಿ ಕರ್ನಾಟಕದವರು ಅಟ್ಟಿಸಿಕೊಂಡು ಬಂದು ಹೊಡೆಯಲೆತ್ನಿಸುತ್ತಾರೆ .  ಇದರಿಂದ ಉತ್ತಮರು ತಮ್ಮ ಕೇರಿಗೆ ಬಂದರೆ ಶಿಕ್ಷಿಸುವ ಚಿತ್ರಣವನ್ನು ಕಾಣುತ್ತೇವೆ. ಇಂದಿಗೆ ಆಶ್ಚರ್ಯವೆನಿಸಬಹುದಾದ  ಎಷ್ಟೋ  ಇಂತಹ ಸಾಮಾಜಿಕ  ಅಂತರಗಳು ಇಂದಿನ ಯಾವುದೋ ಕಲಾತ್ಮಕ ಚಿತ್ರಗಳಲ್ಲಿ ನೋಡುತ್ತಿದ್ದೇವೆ. ಅಥವಾ ಎಲ್ಲೋ ಇನ್ನೂ ಜೀವಂತವಾಗಿದೆಯೇನೋ !
                                                                                             ಜಾತೀಯತೆ, ಅಸ್ಪೃಶ್ಯತೆ , ಏಕಪಕ್ಷೀಯವಾದವಾಗಿರದೇ , ಮೇಲಿನಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ಸಮಾಜದಲ್ಲಿ  ಎರಡು ರೀತಿಯ ಚಲನೆಯನ್ನು ಪಡೆದಿತ್ತು. ಜಾತೀಯತೆ ಆಚರಣೆ ಘೋರವೆಂಬುದಾಗಲಿ , ಮಾನವೀಯತೆಗೆ ಬಗೆಯುವ ಅಪಚಾರವೆಂಬುದಾಗಲಿ  ಭಾವಿಸುವ ಯಾವ ಒಂದು ಬಗೆಯನ್ನೂ  ಕಾಣಲಾರೆವು . ಇದರ ಅರ್ಥ  ಅದನ್ನು ಒಂದು ಮೌಲ್ಯವೆಂಬುದಾಗಿಯೂ  ಅವರು ಭಾವಿಸಿರಲಿಲ್ಲ . ತಲ - ತಲಾಂತರಗಳಿಂದ ಒಳಪಟ್ಟ ತಮ್ಮನ್ನು ತಾವೇ ಕಟ್ಟಳೆಗಳಿಗೆ ಒಳಗಾದ ಜನರನ್ನು ಅಲ್ಲಿ ಕಾಣಬಹುದು.
ಮಲೆನಾಡಿನಲ್ಲಿ ಬಾಲ್ಯವಿವಾಹ ಪದ್ಧತಿ ಇತ್ತು. ( ಹೆಚ್ಚು). ಗಂಡಿಗೆ ಹದಿನಾಲ್ಕು ಹೆಣ್ಣಿಗೆ ಹತ್ತು ವರ್ಷ ತುಂಬುವ ಮೊದಲೇ ಮಾಡುವೆ ಏರ್ಪಾಡಾಗುತ್ತಿತ್ತು ( ತೊಟ್ಟಿಲಲ್ಲೇ  ವಿವಾಹ ಏರ್ಪಡುವ ಸನ್ನಿವೇಶವೂ !)  ಹೀಗೆ ಮಾಡದೇ  ಹೋದರೆ ಅವರ ಪ್ರತಿಷ್ಠೆ ಕುಗ್ಗುವದು ಮತ್ತು ಅವರನ್ನು ಅಪರಾಧಿಗಳಂತೆಯೇ  ಪರಿಗಣಿಸಲಾಗುತ್ತಿತ್ತು

ಈ . ಕಾದಂಬರಿಯಲ್ಲಿ  ಕಂಡು ಬರುವ ಒಂದು ಸನ್ನಿವೇಶ , ಹಳೆಮನೆಯ ಸುಬ್ಬಣ್ಣ ಹೆಗ್ಗಡೆಗೆ ಸುಂದರಿಯಾದ ಮಗಳೊಬ್ಬಳು  ಇದ್ದಳು, ಅ ಆಕೆಯನ್ನು ಕಂಡು ತನ್ನೊಳಗೆ ಚಿಂತಿಸುವನು . ನೆರೆ ಹೊರೆಯವರು ಮಗಳಿಗೆ ವಯಸ್ಸು ಮೀರಿ ಹೋಯಿತೆಂದು ಹೇಳುತ್ತಿದ್ದರೂ  ಸುಬ್ಬಣ್ಣ ಹೆಗ್ಗಡೆಯವರಿಗೆ ಹಾಗೇನೂ  ತೋರುತ್ತಿರಲಿಲ್ಲ. " ಚೆನ್ನಾಗಿ ಕೆಲಸ ಮಾಡಿ ಹೊಟ್ಟೆ ತುಂಬಾ ತಿನ್ನುವ ಹಳ್ಳಿ ಹೆಣ್ಣು ಬೆಳೆಯುವಂತೆ ಮಂಜಮ್ಮ ಸುಪುಷ್ಟವಾಗಿ ಬೆಳೆದಿದ್ದ ಮಾತ್ರಕ್ಕೇ  ಮದುವೆಯ ವಯಸ್ಸು ಮೀರಿ ಹೋಯಿತೆಂದು ಹೇಳುವದು ಯಾವ ನ್ಯಾಯ? ಮದುವೆಯ ವಯಸ್ಸು ಮೀರುವದೆಂದರೆ ಅರ್ಥವಾದರೂ ಏನು? ಮದುವೆಯಾಗುವದಕ್ಕೆ  ಮೊದಲೇ ದೊಡ್ಡವಳಾಗಿಬಿಟ್ಟರೆ ಕಾಡಿಗಟ್ಟ ಬೇಕೆಂಬ  ಹೆದರಿಕೆ ಏನು ತಮಗೆ?"
                                                                                                      -- ಸುಬ್ಬಣ್ಣ ಹೆಗ್ಗಡೆಯವರ ಈ ವಿಚಾರವನ್ನು ಗಮನಿಸಿದಾಗ ಆ ಕಾಲದಲ್ಲಿ ಬ್ರಾಹ್ಮಣರಲ್ಲಿ , ವಯಸ್ಸಿಗೆ ಬಂದಾಗ ವಿವಾಹವಾಗದಿದ್ದಲ್ಲಿ  ಮನೆಯಿಂದ ಹೊರಕ್ಕೆ ಹಾಕುತ್ತಿದ್ದರೇ ? ಕಾಡಿಗೆ ಅಟ್ಟುವ ಪದ್ಧತಿ ಇತ್ತೇ! ಭಯದ ಪ್ರಶ್ನೆ ಇಲ್ಲಿ ಕಾಣಿಸುತ್ತಿದೆ...
 ಅಧುನಿಕ ಮಲೆನಾದಿಗನಾಗಿ ಸುಬ್ಬಣ್ಣ ಇಲ್ಲಿ ಕಂಡು ಬರುವನು. ಇಂದು ಮಲೆನಾಡು ಬಾಲ್ಯ ವಿವಾಹದ  ಕರಿ ನೆರಳಿನಿಂದ  ಮುಕ್ತವಾಗಿದೆ .  ಹೆಚ್ಚಿನ ಪಕ್ಷ  ಈ ಭಯದಿಂದಲೇ ಅದೆಷ್ಟು ಮುಗ್ಧ ಮನಸುಗಳಿಗೆ  ಸಮಾಜ ಕೊಳ್ಳಿ  ಇಟ್ಟಿತ್ತೋ ... ಅದೆಷ್ಟು ಅಪ್ಪಂದಿರ/ ಅಮ್ಮಂದಿರ  ಹಳ್ಳಿ ಹೂವುಗಳ ಬಾಡುವಿಕೆಗೆ  ಇಂಥಹ  ನಿಯಮ ಕಾರಣವಾಗಿತ್ತೋ .....



ಮುಂದಿನ ಭಾಗದಲ್ಲಿ..... " ವರದಕ್ಷಿಣೆ "


ಹಳೆಯ ಮೆಲುಕು..... ಹಳೆಯ ಪೇಪರು..... ಸಂಭ್ರಮ .....

(* ಈ ಪತ್ರಿಕೆಯಲ್ಲಿ  ಬಳಸಿಕೊಂಡ ಪುಸ್ತಕಗಳ ದಾಖಲೆಯನ್ನು  ಅಂದು ನಾನು ಮಾಡಿರದ ಕಾರಣ  ಪರಾಮರ್ಶನ  ಗ್ರಂಥ ಪಟ್ಟಿ ಕೊಡಲು ಸಾಧ್ಯವಾಗುತ್ತಿಲ್ಲ . ಆದರೂ ... ಇಷ್ಟನ್ನು ಹೇಳಬಲ್ಲೆ.... " ಸಹ್ಯಾದ್ರಿ . ಗಂಗೋತ್ರಿ "... ಈ ಎರಡು  ಕುವೆಂಪು ಅಭಿನಂದನಾ ಗ್ರಂಥವನ್ನು  ಈ ಪತ್ರಿಕೆಯ ಸಲುವಾಗಿ  ಪರಾಮರ್ಶಿಸಿದ್ದೆ.)




ಚಂದ್ರಿಕಾ ಹೆಗಡೆ 

1 ಕಾಮೆಂಟ್‌: