24 ಜನವರಿ 2011

ನಿನ್ನ ನೆನಪ ಹೊತ್ತು



  ಕಡಲು ಕಾಯುವದಿಲ್ಲ ಗೆಳತಿ ,
ಕಣ್ಣಿಗಿಷ್ಟೇ ! ಅಷ್ಟಗಲ ಗೋಚರ 
ನಿನ್ನ ಕಣ್ಣಂಚಿನ ಬಿಂದುಗಿಂತಲೂ 
ಉಪ್ಪು, ನದಿ ನೀರು ಸೇರುತ್ತಿದ್ದರೂ....
ಕಾಲ ಕಾಯುವದಿಲ್ಲ ಗೆಳತೀ,
ಅಗೋಚರ, ಕ್ಷಿಪ್ರಗತಿ
ನಿನ್ನ ನೆನಪು ಮರುಕಳಿಸಿದಾಗಲಂತೂ 
ನಿಶ್ಚಲವಾಗಬಾರದೇ ? ನನ್ನ ಕೇಳೀತೇ?
ನಿನ್ನೊಪ್ಪಿಗೆಯೊಂದೆ ಸಾಕೆನಗೆ 
ತಿರುಗಿಸಲು ಮರುಕಳಿಸಲು 
ಅನೂಹ್ಯ ತೆರೆಗಳಿಗೆ   ಬರವಂತೂ ಇಲ್ಲ
ಕಡಲ ಗಂಭೀರ , ಕಾಲ ಗತಿ  ನಿಲ್ಲಬಾರದೇ ?
 ಕಡಲು ಸಹನೆಯಿಂದ ಇರುವದಿಲ್ಲ ಗೆಳತೀ 
ನಿನ್ನ ಮುಗ್ಧತೆ,  ಕಾಯುವಿಕೆ ಅದಕ್ಕೆಲ್ಲಿ ಬರಬೇಕು ?
ಕಾಡುತ್ತದೆ, ಸುಮ್ಮಸುಮ್ಮನೆಯೇ
ನಿಂತಲ್ಲಿ ನಿಲ್ಲದ ಭಾವ ಹೊಮ್ಮಿಕೆಗಳು
ನಿಶ್ಶಬ್ದತೆಯಿಂದ  ಸೋರಿಹೋಗುತ್ತದೆ
ಗೊತ್ತಿಲ್ಲದೆಯೇ ...
ಬಾಳ ಬಿಂಬದಲ್ಲಿ ನಿನ್ನ ನೆರಳು !
ಕಂಡೀತೆ ? ಒಮ್ಮೆ- ತಿರುಗಿ ನೋಡಲೇ ?
ಬಿಟ್ಟ ಮನದ ಸಂಗದಲ್ಲಿ 
ಒತ್ತೊತ್ತಾಗಿರುವ ಯಾವ ನೆನಪ ಕರೆಯಲಿ ?
ದೂರ ಸಾಗರದಲ್ಲಿ  ಮಿಂಚಿನಗತಿಯಲ್ಲಿ
ಹೊರಟು ನಿಂತ ನಿನ್ನ ....  ಮರು ನುಡಿಯದೇ
ಕಡಲು ದೂಡಿ- ದೂಡಿ ತರಬಾರದೇ ?
ಅಲೆಯೊಂದಿಗೆ  ನಿನ್ನ
ದಡಕ್ಕೆ - ನನ್ನೀ ಸನಿಹಕ್ಕೆ
ನಿನ್ನ ನೆನಪ ಹೊತ್ತು ಕಡಲ ಕಾಯುತ್ತಿರುತ್ತೇನೆ .


                                           ಕಡಲ ಹತ್ತಿರ ಕಾಯುವದು ಇಲ್ಲವಾದರೂ, ಕರೆಗಾಗಿ ಕಾಯುತ್ತಿರುವ
                                                                  ಚಂದ್ರಿಕಾ ಹೆಗಡೆ
  

4 ಕಾಮೆಂಟ್‌ಗಳು: